Advertisement

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿಗೆ ಮಾದರಿ

04:35 PM Sep 06, 2019 | Naveen |

ಬೀದರ: ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಹಾಗೂ ಸ್ವಾಮಿ ಸಮರ್ಥ ರಾಮದಾಸರ ಮಧ್ಯದ ಗುರು ಶಿಷ್ಯ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಶಿವಯೋಗಿ ಸಿದ್ಧರಾಮೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಪ್ರೊ| ಮಿಲಿಂದಾಚಾರ್ಯರು ಹೇಳಿದರು.

Advertisement

ನಗರದ ಪ್ರತಾಪನಗರ‌ದ ಜನಸೇವಾ ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಜಗತ್ತಿಗೆ ಗುರುಮಂತ್ರ ಹೇಳಿಕೊಟ್ಟ ದೇಶವೇ ಭಾರತ. ಈ ಹಿಂದೆ ರಾಜ, ಮಹಾರಾಜರ ಕಾಲದಲ್ಲಿ ಗುರು ಶಿಷ್ಯರ ಸಂಬಂಧ ಬಹಳ ಎತ್ತರದಲ್ಲಿತ್ತು ಎನ್ನುವುದಕ್ಕೆ ಅನೇಕ ಶ್ರೇಷ್ಠ ಉದಾಹರಣೆಗಳಿವೆ. ರಾಜರು ಗುರುಗಳನ್ನು ಮಾರ್ಗದರ್ಶನಕ್ಕೆಂದು ತಮ್ಮ ಆಸ್ತಾನದಲ್ಲಿರಿಸಿಕೊಳ್ಳುತ್ತಿದ್ದರು. ಆದರೆ ವಿದ್ಯಾಭ್ಯಾಸದ ಸಮಯದಲ್ಲಿ ಗುರುಗಳಿರುವ ಕಾಡಿನ, ಅವರ ಗುಡಿಸಲಿಗೆ ಹೋಗಿ ವಿದ್ಯೆ ಕಲಿಯುತ್ತಿದ್ದರು. ಇಂಥ ಔದಾರ್ಯಯುಳ್ಳ ಜಗತ್ತಿನ ಚೊಚ್ಚಲ ದೇಶ ನಮ್ಮದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾವಿ ಪೀಳಿಗೆ ಅಂಥ ಮಹತ್ತರ ಸಂಸ್ಕೃತಿಗೆ ಕಟ್ಟು ಬೀಳಬೇಕೆಂದು ತಿಳಿಸಿದರು.

ಡಾ| ರಾಧಾಕೃಷ್ಣನ್‌ ಅವರು ಒಬ್ಬ ಶ್ರೇಷ್ಠ ಗುರು ಹಾಗೂ ತತ್ವಜ್ಞಾನಿಯಾಗಿದ್ದರು. ಆದರ್ಶ ಗುರುವಾದವನು ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಹಾಗೂ ಎತ್ತರೆತ್ತರಕ್ಕೆ ಬೆಳೆದು ನಿಲ್ಲುತ್ತಾರೆ ಎನ್ನುವುದಕ್ಕೆ ಅವರೇ ತಾಜಾ ನಿದರ್ಶಕರು ಆಗಿದ್ದರು. ಜೀವನದಲ್ಲಿ ಉತ್ತಮ ನಡೆ, ನುಡಿ ತೋರುವವರೇ ನಿಜವಾದ ಶಿಕ್ಷಕ ಎಂದ ಅವರು, ಕೇವಲ ಬಿಇಡಿ, ಡಿಇಡಿ ಪಾಸಾದೋಡನೇ ಶಿಕ್ಷಕರಾಗಲು ಸಾಧ್ಯವಿಲ್ಲ. ಮಕ್ಕಳ ಸರ್ವಾಂಗಿಣ ವಿಕಾಸಕ್ಕೆ ಮುಂದಾದರೆ, ಅವರಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಿದರೆ ಅವರೇ ನಿಜವಾದ ಶಿಕ್ಷಕನಾಗಲು ಸಾಧ್ಯ ಎಂದರು.

ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಪ್ರಕಾರ ಒಂದು ದೇಶ ಸಮಗ್ರ ವಿಕಾಸವಾಗಬೇಕಾದರೆ ಶಿಕ್ಷಕರ ಮೇಲೆ ಜವಾಬ್ದಾರಿಯಿದ್ದು, ಶಿಕ್ಷಕರ ನಿಸ್ವಾರ್ಥ ಸೇವೆಯಿಂದ ಮಕ್ಕಳ ಸರ್ವತರ ವಿಕಾಸ ಸಾಧ್ಯವಾಗಲಿದೆ. ಮಕ್ಕಳಿಗೆ ಉತ್ತಮ ವಿದ್ಯೆ, ಬುದ್ದಿ ಕಲಿಸುವ ಮೂಲಕ ಒಬ್ಬ ಶ್ರೇಷ್ಠ ಶಿಲ್ಪಿಯಾಗಿರಲು ಸಾಧ್ಯವಿದೆ ಎಂದು, ಶಿಕ್ಷಕರ ಕುರಿತು ಗೀತೆ ಪ್ರಸ್ತುತಪಡಿಸಿದರು.

Advertisement

ಇದಕ್ಕೂ ಮೊದಲು ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಪಾದ ಪೂಜೆ ಮಾಡಿ, ಆರತಿ ಎತ್ತುವ ಮೂಲಕ ಗುರು ಆರಾಧನೆ ನೆರವೇರಿಸಿದರು. ನಂತರ ಸಾಮೂಹಿಕವಾಗಿ ಸಂಸ್ಕೃತದ ಶ್ಲೋಕದೊಂದಿಗೆ ಶಿಕ್ಷಕರನ್ನು ಅಭಿನಂದಿಸಲಾಯಿತು. ಶಾಲೆಯ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶಿವರಾಜ ಹುಡೇದ್‌, ಹಿರಿಯ ಸದಸ್ಯ ಬಿ.ಎಸ್‌. ಕುದುರೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next