ಬಿದರ: ಕನ್ನಡ ಭಾಷೆ ವಿಶ್ವದ ಭಾಷೆಗಳಲ್ಲೊಂದಾಗಿದೆ. ಕನ್ನಡಿಗರು ಯಾವ ದೇಶದಲ್ಲಿ ನೆಲೆಸಿದರೂ ಅಲ್ಲಿ ಕನ್ನಡ ಭಾಷೆ ಬಳಸುವ ಮೂಲಕ ವಿಶ್ವ ಭಾಷೆಯಾಗಲು ಶ್ರಮಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಹೇಳಿದರು.
ನೌಬಾದ ವಿವೇಕಾನಂದ ಕಾಲೋನಿ ಅಲ್ಲಮಪ್ರಭು ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 105ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಕನ್ನಡದ ಸ್ಥಾನಮಾನ ಹಾಗೂ ಅಮೂಲ್ಯ ಗ್ರಂಥಗಳ ಪ್ರಕಟಣೆ, ಕನ್ನಡ ಜಾಗೃತಿ, ಮೊದಲಾದ ಕಾರ್ಯ ಚಟುವಟಿಕೆಗಳು ಹಮ್ಮಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕಳೆದ 105 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದೆ. ಕನ್ನಡ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕನ್ನಡ ಭಾಷೆಯಲ್ಲಿಯೇ ಉನ್ನತ ಶಿಕ್ಷಣ ಜಾರಿ ಮಾಡಿದಾಗ ಮಾತ್ರ ಇದು ಸಾಧ್ಯ ಎಂದು ಹೇಳಿದರು.
ಶಿವಕುಮಾರ ಕಟ್ಟೆ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ 2000 ವರ್ಷಗಳ ಇತಿಹಾಸ ಇದೆ. 12ನೇ ಶತಮಾನದಲ್ಲಿಯೇ ಬಸವಾದಿ ಶಿವಶರಣರು ಕನ್ನಡ ಭಾಷೆಯಲ್ಲಿಯೇ ವಚನ ಬರೆಯುವ ಮೂಲಕ ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದರು. ಈ ಸಂಸ್ಥೆ ಕನ್ನಡ ವ್ಯಾಕರಣ, ಭಾಷಾ ಚರಿತ್ರೆ, ನಿಘಂಟುಗಳ ರಚನೆ, ಕನ್ನಡ ಶಾಸ್ತ್ರಗ್ರಂಥಗಳ, ಪಾರಿಭಾಷಿಕ ಶಬ್ದಕೋಶಗಳ ನಿರ್ಮಾಣ, ತತ್ವವಿಚಾರ, ಸಾಹಿತ್ಯ ಗ್ರಂಥಗಳ ಲೇಖನಕ್ಕೆ ಪ್ರೋತ್ಸಾಹ ಮತ್ತು ಅವುಗಳ ಪ್ರಕಟಣೆೆ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕಸಾಪ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬೀದರ ಜಿಲ್ಲೆಯಲ್ಲಿ ಕೂಡ ಕನ್ನಡ ಭಾಷೆ ಜಾಗೃತಿಗೊಳಿಸಲು ನೂರಾರು ಜನ ಕವಿಗಳು, ಲೇಖಕರು ತಮ್ಮ ಪುಸ್ತಕಗಳನ್ನು ಹೊರತರುವ ಮೂಲಕ ಕನ್ನಡದ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್. ಮನೋಹರ, ಟಿ.ಎಂ. ಮಚ್ಚೆ, ಸಿಆರ್‌ಪಿ ಈಲೇಶಕುಮಾರ ಸೋನಿ, ಮುಖ್ಯ ಶಿಕ್ಷಕ ಸುರೇಕಲಾ ಮಾತನಾಡಿದರು.
ಇದೇ ಸಂಧರ್ಭದಲ್ಲಿ ರಾಜ್ಯಮಟ್ಟದ ಕನ್ನಡ ಸೇವಾ ಪ್ರಸಸ್ತಿ ಪುರಸ್ಕೃತರಾದ ಸಂಜೀವಕುಮಾರ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.
ಕಲ್ಯಾಣರಾವ ಚಳಕಾಪುರೆ, ರಮೇಶ ಬಿರಾದಾರ, ಓಂಪ್ರಕಾಶ ಧಡ್ಡೆ, ಜಗನ್ನಾಥ ಕಮಲಾಪುರೆ, ಶರಣಬಸವ ಲಂಗೋಫಟಿ ಇದ್ದರು.