Advertisement

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಸಹಕರಿಸಿ

05:14 PM Nov 30, 2019 | Naveen |

ಬೀದರ: ಜಿಲ್ಲೆಯಲ್ಲಿನ ನಕಲಿ ವೈದ್ಯರ ಕ್ಲಿನಿಕ್‌ ಗಳನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮುಚ್ಚುತ್ತಿರುವ ಕ್ರಮ ಸ್ವಾಗತಾರ್ಹ. ನಕಲಿ ವೈದ್ಯರನ್ನು ಜಿಲ್ಲೆಯಿಂದ ಹೊರ ಹಾಕುವವರೆಗೂ ಈ ವಿಷಯದಲ್ಲಿ ಯಾರಿಗೂ ಸಲಿಗೆ ಕೊಡುವುದಿಲ್ಲ. ಇದಕ್ಕೆ ಎಲ್ಲರ ಸಹಕರಿಸಬೇಕು ಎಂದು ಸಂಸದ ಭಗವಂತ ಖೂಬಾ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವವರು ಶುಕ್ರವಾರ ಸಂಸದರ ಭೇಟಿ ವೇಳೆ ಈ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಾಗಿರುವ ನಕಲಿ ವೈದ್ಯರ ಹಾವಳಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರು ನೀಡುತ್ತಿರುವ ಹೈ ಆಂಟಿಬೇಟಿಕ್‌, ಸ್ಟೆರಾಯ್ಡ ನಿಂದ ಇನ್ನೂ ಕೆಲವರು ನೆರೆ ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವವರ ಬಳಿ ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್ ಅಡಿ ಪಡೆದಿರುವ ಪ್ರಮಾಣ ಪತ್ರವೂ ಇಲ್ಲ. ಇನ್ನು ಕೆಲವೆಡೆ ಹೋಮಿಯೋಪತಿ ವೈದ್ಯರು ಆಲೋಪತಿ ಚಿಕಿತ್ಸೆ ನೀಡುವುದು, ಆಲೋಪತಿ ವೈದ್ಯರು ಹೊಮಿಯೋಪತಿ ಚಿಕಿತ್ಸೆ ನೀಡುವುದು ಸಹ ನಡೆಯುತ್ತಿದೆ. ಇವರನ್ನು ಸಹ ನಕಲಿ ವೈದ್ಯರೆಂದು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇಂಥವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ಕಳೆದ ತಿಂಗಳ ದಿಶಾ ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ನಾನೇ ಸೂಚಿಸಿದ್ದೇನೆ. ಅದರಂತೆ ಜಿಲ್ಲಾ ಆರೋಗ್ಯ ಇಲಾಖೆ ಕ್ರಮ ವಹಿಸುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು. “ನಾವು ಯಾವುದೇ ತಪ್ಪು ಮಾಡಿಲ್ಲ. ಕಲ್ಕತ್ತಾ, ಬಿಹಾರ ಕಡೆಯಿಂದ ಬಂದ ಕೆಲವು ಜನರು ಹೀಗೆ ಮಾಡುತ್ತಿದ್ದಾರೆ. ಹಾಗೆ ನೆರೆ ರಾಜ್ಯವಾದ ತೆಲಂಗಾಣದಲ್ಲಿ ನಮ್ಮಂಥವರಿಗೆ ಸರ್ಕಾರದಿಂದ ಮಾನ್ಯತೆ ನೀಡಿದ್ದಾರೆ. ನಮಗೂ ಮಾನ್ಯತೆ ಕೊಡಿಸಬೇಕು ಮತ್ತು ಅಲ್ಲಿಯವರೆಗೆ ಪ್ರ್ಯಾಕ್ಟೀಸ್‌ ಮಾಡಲು ಅವಕಾಶ ಮಾಡಿಕೊಡುವಂತೆ ಸಂಸದರಲ್ಲಿ ಕೋರಿದರು.

ಈ ವೇಳೆ ಮಾತನಾಡಿದ ಸಂಸದ ಖೂಬಾ, ಜನರಿಗೆ ಅನ್ಯಾಯವಾಗುವ ಯಾವುದೇ ವಿಷಯಕ್ಕೆ ಧ್ವನಿ ಎತ್ತುತ್ತೇನೆ. ನೀವು ಕೇಳುತ್ತಿರುವುದು ನ್ಯಾಯಯುತವಾಗಿದ್ದರೆ ಸರಿಯಾದ ದಾಖಲೆಗಳನ್ನು ಒದಗಿಸಿ. ನಾನು ಸರ್ಕಾರದ ವಿವೇಚನೆಗೆ ತಂದು ನ್ಯಾಯ ಕೊಡಿಸುತ್ತೇನೆ. ಆದರೆ, ಸರ್ಕಾರದಿಂದ ಮಾನ್ಯತೆ ಸಿಗುವವರೆಗೆ ವಿನಾಕಾರಣ ಚಿಕಿತ್ಸೆ ನೀಡಿ ಜನರ ಜೀವನದ ಜೊತೆ ಆಟವಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next