ಬೀದರ: ಜಿಲ್ಲೆಯ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ನೂತನ ಸಚಿವ ಪ್ರಭು ಚವ್ಹಾಣ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ರೈತರು ಪ್ರಕೃತಿ ವಿಕೋಪದಿಂದ ನಾಲ್ಕೈದು ವರ್ಷಗಳಿಂದ ಅನಾವೃಷ್ಟಿ ಹಾಗೂ ಅತೀವೃಷ್ಟಿಯಿಂದ ಆರ್ಥಿಕವಾಗಿ ಸಂಕಷ್ಟ ಅನುಭವಿಸಿ ನೇಣಿಗೆ ಶರಣಾಗುತ್ತಿದ್ದಾರೆ. ಕೂಡಲೆ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಸತತ ಬೆಲೆ ಕುಸಿತ ಉಂಟಾಗುತ್ತಿದ್ದು, ಅನೇಕ ಹೋರಾಟ ಹಾಗೂ ಮನವರಿಕೆ ಮಾಡಿಕೊಟ್ಟರೂ ನಮ್ಮ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುವಂತಾಗುತ್ತಿದೆ. ನೆರೆಯ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸಿಗುವಂತಹ ಕಬ್ಬಿನ ಬೆಲೆ ಇಲ್ಲಿ ಸಿಗುತ್ತಿಲ್ಲ. ರೈತರ ಮೇಲೆ ನಿರಂತರ ಶೋಷಣೆ ನಡೆದಿದೆ. ಆದ್ದರಿಂದ ನೂತನ ಸಚಿವರು ಜಿಲ್ಲೆಯ ಬಗ್ಗೆ ಹಾಗೂ ರೈತರ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೇಡಿಕೆಗಳು: ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿರುವುದರಿಂದ ಮೋಡ ಬಿತ್ತನೆ ಮಾಡಿ ಜಿಲ್ಲೆಯ ಜನ ಜಾನುವಾರು, ಪ್ರಾಣಿ ಪಕ್ಷಿಗಳ ರಕ್ಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಕಟ್ಟಿದ ಎಲ್ಲಾ ರೈತರಿಗೂ ಅನ್ಯಾಯವಾಗದಂತೆ ಹಣ ಜಮಾ ಮಾಡಬೇಕು. ಕಳೆದ ಸಾಲಿನಲ್ಲಿ ಬರ ಘೋಷಣೆ ಮಾಡಿದರೂ ರೈತರಿಗೆ ಪ್ರಕೃತಿ ವಿಕೋಪದ ಪರಿಹಾರ ಹಣ ನೀಡಿಲ್ಲ. ಕೂಡಲೇ ಪರಿಹಾರ ಧನ ನೀಡಬೇಕು. ಕಳೆದ ಸಾಲಿನಲ್ಲಿ ಬಹಳಷ್ಟು ರೈತರಿಗೆ ಕಬ್ಬಿನ ಬಾಕಿ ಹಣ ಉಳಿದುಕೊಂಡು ಕೂಡಲೇ ರೈತರ ಬಾಕಿ ಹಣ ಪಾವತಿಗೆ ಕ್ರಮ ವಹಿಸಬೇಕು. ರಾತ್ರಿಯಲ್ಲಿ ಹೊಲಗಳಲ್ಲಿ ವಿದ್ಯುತ್ ಇಲ್ಲದೇ ರೈತನಿಗೆ ಸಂಕಷ್ಟವಾಗುತ್ತಿದ್ದು, ನಿರಂತ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿದ್ದು, ಕಾಡುಪ್ರಾಣಿಗಳಿಂದ ರಕ್ಷಣೆ ನೀಡುವ ಕಾರ್ಯ ಆಗಬೇಕು. ಮಾಂಜ್ರಾ ನದಿಗೆ ದೊಡ್ಡ ಬ್ಯಾರೇಜ್ ನಿರ್ಮಿಸಿ ಲಿಪ್ಟ್ ಇರಿಗೇಷನ್ ಮಾಡಬೇಕು. ಬಚಾವತ್ ಆಯೋಗದಂತೆ ಇನ್ನೂ ಗೋದಾವರಿ ಬೇಸಿನ ನೀರನ್ನು ನಮ್ಮ ಜಿಲ್ಲೆಯಲ್ಲಿ ಉಪಯೋಗವಾಗುವ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯಲ್ಲಿ ಹೆಸರು ಬೆಳೆ ರಾಶಿ ಪ್ರಾರಂಭವಾಗಿರುವುದರಿಂದ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ತಕ್ಷಣದಲ್ಲಿ ತೆರೆಯಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ ಬಹಳಷ್ಟು ರೈತರಿಗೆ ಇನ್ನೂ ವಿಮಾ ಹಣ ಸಿಕ್ಕಿಲ್ಲ. ಅದನ್ನು ಜಿಲ್ಲಾಡಳಿತದಿಂದ ಸರ್ವೇ ಮಾಡಿಸಿ ಎಲ್ಲಾ ರೈತರಿಗೆ ಸಿಗುವಂತೆ ಮಾಡಬೇಕು. ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಪುನಃ ಆರಂಭಿಸಬೇಕು. ಜಿಲ್ಲೆಯಲ್ಲಿ ರೈತರ ಮೇಲಿರುವ ಎಲ್ಲಾ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.