Advertisement

ಕ್ರೀಡಾಂಗಣ ಕಾಮಗಾರಿ ತನಿಖೆಗೆ ಆದೇಶ

03:21 PM Oct 12, 2019 | |

ಬೀದರ: 387.79 ಲಕ್ಷ ರೂ. ಕಾರ್ಯಾದೇಶದೊಂದಿಗೆ ನಡೆದ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಕಾರ್ಯ ತೃಪ್ತಿಕರವಾಗಿಲ್ಲ. ಟ್ರ್ಯಾಕ್‌ ಸರಿಯಾಗಿ ನಿರ್ಮಾಣವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಸಂಬಂಧಿಸಿದ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಅಧಿಕಾರಿಗಳು ಕಾಮಗಾರಿ ಪ್ರಗತಿಯನ್ನು ವೆಬ್‌ ಸೈಟ್‌ನಲ್ಲಿ ಕಾಲಕಾಲಕ್ಕೆ ಅಪಡೇಟ್‌ ಮಾಡಬೇಕು. ಅನವಶ್ಯಕ ಕಾರಣಗಳನ್ನು ಹೇಳುತ್ತ ಸಮಯ ವ್ಯರ್ಥ ಮಾಡದೇ, ಬಾಕಿ ಇರುವ ಕೆಲಸವನ್ನು ಕೂಡಲೇ ಆರಂಭಿಸಿ, ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಂಪರ್ಕ ರಸ್ತೆ ಕಾಮಗಾರಿ ಮಾತ್ರ ಬಾಕಿ ಇದೆ ಎಂದು ಕೆಎಸ್‌ಪಿಎಚ್‌ ಮತ್ತು ಐಡಿಸಿಎಲ್‌ ಏಜೆನ್ಸಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಫಲಿತಾಂಶ ಸುಧಾರಣೆ: ಕಳೆದ ಐದು ವರ್ಷಗಳಲ್ಲಿ ಶೇ.75ಕ್ಕಿಂತ ಕಡಿಮೆ ಫಲಿತಾಂಶ ಪಡೆದ 108 ಶಾಲೆಗಳು ಬೀದರ ಜಿಲ್ಲೆಯಲ್ಲಿ ಇರುವುದನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆಯಾಗುವ ನಿಟ್ಟಿನಲ್ಲಿ ಇಂತಹ ಶಾಲೆಗಳಲ್ಲಿ ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯಗಳ ಮೇಲೆ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಹೆಚ್ಚುವರಿಯಾಗಿ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ಎಚ್ಚರಿಕೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬಹುತೇಕ ಕಾಮಗಾರಿಗಳು ಲೋಕೋಪಯೋಗಿ ಇಲಾಖೆಯಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಾಕಷ್ಟು ವಿಳಂಬ ಮಾಡಲಾಗುತ್ತಿದೆ ಎಂದು ಆಯುಕ್ತರು ಎಂಜಿಯರ್‌ ಗಳನ್ನು ತರಾಟೆಗೆ ತೆಗೆದುಕೊಂಡರು. ಚಿಟಗುಪ್ಪಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಯೋಗ ಕೋಣೆ ಹಾಗೂ ಕಾಂಪೌಂಡ್‌ ಗೋಡೆ ನಿರ್ಮಾಣ ಕಾಮಗಾರಿ ನಡೆದಿಲ್ಲ. ದುಬಲಗುಂಡಿ ಗ್ರಾಮದ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಗಡವಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿಲ್ಲ. 2019ರ ಫೆಬ್ರವರಿಯಲ್ಲಿಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ನೀಲಾಂಬಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಡಿಟೋರಿಯಂ ನಿರ್ಮಾಣವಾಗಿಲ್ಲ. 2019ರ ಜೂನ್‌ಲ್ಲಿಯೇ ವರ್ಕ್‌ ಆರ್ಡರ್‌ ನೀಡಿದ್ದರೂ ಹುಲಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 6 ಹೆಚ್ಚುವರಿ ಕಟ್ಟಡ ನಿರ್ಮಿಸಿಲ್ಲ. ಔರಾದ್‌ ತಾಲೂಕಿನ ಹೆಡಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿಲ್ಲ. ನೀವೇನು ಮಾಡುತ್ತಿ ದ್ಧೀರಿ? ಯಾಕೆ ವಿಳಂಬ ಮಾಡುತ್ತಿದ್ಧೀರಿ? ಎಂದು ಆಯುಕ್ತರು, ಲೋಕೋಪಯೋಗಿ ಇಲಾಖೆಯ ಎಂಜಿನಿಯರಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಟೋಬರ್‌ ತಿಂಗಳ ಅಂತ್ಯದೊಳಗೆ, ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಏಜೆನ್ಸಿ ಬದಲಾವಣೆ, ಟೆಂಡರ್‌ ಪ್ರಕ್ರಿಯೆಯಂತಹ ಕಾರಣಗಳಿಂದ ಕಾಮಗಾರಿ ನಡೆದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪ್ರತಿಕ್ರಿಯಿಸಿದರು.

ಕಾಮಗಾರಿಗೆ ಗಡುವು: ಭಾಲ್ಕಿ ತಾಲೂಕಿನ ಜಾಲಹಳ್ಳಿ ಗ್ರಾಮದಿಂದ ವಾಯಾ ರುದನೂರು ಮಾರ್ಗವಾಗಿ ಧನ್ನೂರ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ 2017-18ನೇ ಸಾಲಿನ 13 ಕಾಮಗಾರಿಗಳನ್ನು ಬರುವ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತರು, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಅಧಿಕಾರಿಗಳಿಗೆ ಗಡುವು ವಿಧಿಸಿದರು.

ಅಧಿಕಾರಿಗಳು ತರಾಟೆಗೆ: ಸಾವಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ 2019ರ ಜುಲೈ ಮಾಹೆಯಲ್ಲಿಯೇ ಕಾರ್ಯಾದೇಶ ನೀಡಲಾಗಿದೆ. ಆದರೂ ಇದುವರೆಗೆ ಕೆಲಸವನ್ನೇಕೆ ಆರಂಭಿಸಿಲ್ಲ ಎಂದು ಪ್ರಾದೇಶಿಕ ಆಯುಕ್ತರು, ಪಂಚಾಯತ್‌ ರಾಜ್‌ ಎಂಜಿನೀಯರಿಂಗ್‌ ವಿಭಾಗದ ಅಭಿಯಂತರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ಶಾಲೆಗಳಿಗೆ ಟೂ ಟೈರ್‌ ಕಾಟ್ಸ್‌ ಹಾಗೂ ಡೈನಿಂಗ್‌ ಟೇಬಲ್‌ ಸರಬರಾಜಿಗೆ ಕೂಡಲೇ ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಏಜೆನ್ಸಿ ಬದಲಾವಣೆಗೆ ಸೂಚನೆ: ಭಾಲ್ಕಿ ಪದವಿ ಪೂರ್ವ ಕಾಲೇಜಿಗೆ ಪೀಠೊಪಕರಣ ಒದಗಿಸುವ, ಬೀದರ ತಾಲೂಕಿನ ಪ್ರಥಮ ದರ್ಜೆ ಕಾಲೇಜಿಗೆ ಡ್ನೂಯಲ್‌ ಡೆಸ್ಕ್ ಸರಬರಾಜು ಮಾಡುವ, ಭಾಲ್ಕಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಪೀಠೊಪಕರಣ ಒದಗಿಸುವ ಕಾರ್ಯವನ್ನು ಡಿಯುಡಿಸಿ ಬದಲಾಗಿ ಆಯಾ ಕಾಲೇಜುಗಳೇ ಅನುಷ್ಠಾನಗೊಳಿಸುವಂತೆ ಕ್ರಮ ವಹಿಸಲು ಆಯುಕ್ತರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next