ಬೀದರ: ಶ್ರಾವಣ ಮಾಸ ಹಿಂದೂ ಧರ್ಮಿಯರಿಗೆ ಪವಿತ್ರ ಮಾಸವಾಗಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶಕುಂತಲಾ ಬೆಲ್ದಾಳೆ ಹೇಳಿದರು.
ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ನಡೆದ ಶ್ರಾವಣ ಮಾಸದ ಸಂಗೀತ ದರ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ಲಾಮ್ ಧರ್ಮಿಯರಿಗೆ ರಂಜಾನ್ ಪವಿತ್ರ ಮಾಸವಾಗಿರುವಂತೆ ನಮಗೆ ಶ್ರಾವಣ ಮಾಸ ಅಷ್ಟೇ ಪವಿತ್ರವಾಗಿದೆ. ಈ ಮಾಸಾಚಾರಣೆಯಿಂದ 11 ತಿಂಗಳ ಕಾಲ ಮನಕ್ಕೆ ಹೊಸ ಚೈತನ್ಯ, ಸ್ಫೂರ್ತಿ ನೀಡುತ್ತದೆ. ಈ ಮಾಸದಲ್ಲಿ ಧಾರ್ಮಿಕ ಕ್ರಿಯಗಳಾದ ಭಜನೆ, ಕೀರ್ತನೆ ಹಾಗೂ ಪ್ರವಚನಗಳನ್ನು ಆಲಿಸಿ, ಪಾಲಿಸುವುದರಿಂದ ನಮ್ಮ ಜೀವನ ಪಾವನವಾಗುತ್ತದೆ. ಮಂದಿರ, ಮಠಗಳಲ್ಲಿ ನಿತ್ಯ ಭಜನೆ ಹಾಗೂ ಪ್ರವಚನ ಜರರುಗುವುದರಿಂದ ಆಂತರಿಕ ಶುದ್ಧಿ ಜೊತೆಗೆ ಮಾನಸಿಕ ಹಿತ ದೊರೆಯುತ್ತದೆ. ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ನಾವು ನಿತ್ಯ ಗುರುವಿನ ಆರಾಧನೆ, ಯೋಗ, ಜಪ, ತಪ, ಪ್ರಾರ್ಥನೆ ಹಾಗೂ ಸಂಗೀತ ಕಾರ್ಯಕ್ರಮಗಳತ್ತ ಮುಖ ಮಾಡಬೇಕಿದೆ ಎಂದರು.
ಮಕ್ಕಳ ರೋಗ ತಜ್ಞ ಡಾ| ಸಿ.ಆನಂದರಾವ್ ಮಾತನಾಡಿ, 100 ವರ್ಷಗಳ ಹಿಂದೆ ಸಕ್ಕರೆ ಕಾಯಿಲೆಯಾಗಲಿ ಅಥವಾ ರಕ್ತದೊತ್ತಡದ ಪರಿಚಯವೇ ಇರಲಿಲ್ಲ. ಆದರೆ ಇಂದು ಜನ ಸಾಮಾನ್ಯರಿಗಿಂತ ವೈದ್ಯ ಸಮೂಹಕ್ಕೆ ಹಾಗೂ ಅವರ ಕುಟುಂಬ ವರ್ಗಕ್ಕೆ ಹಲವು ರೋಗಗಳು ಕಾಡುತ್ತಿವೆ. ಸ್ವಾರ್ಥದ ಹಣಬಲವು ವೈದ್ಯ ಲೋಕವನ್ನೇ ಕಂಗಾಲಾಗಿಸಿದ್ದು, ಬಡವರ, ಹಾಗೂ ದುರ್ಬಲರ ಪ್ರಾಮಾಣಿಕ ಸೇವೆ ಮಾಡಿದಲ್ಲಿ ಪುಣ್ಯಪ್ರಾಪ್ತಿ ಸಾಧ್ಯವಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಿಗುವ ಪುಣ್ಯ ಇಡೀ ವರ್ಷಪೂರ್ತಿ ಖರ್ಚು ಮಾಡಬಹುದು. ಶ್ರವಾಣ ಮಾಸದಲ್ಲಿ ತಪ್ಪದೆ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ದೇವರ ಸ್ಮರಣೆಯಿಂದ ನೆಮ್ಮದಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಮಠದ ಅಧಿಪತಿ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ಕಾಮಶೆಟ್ಟಿ ಚಿಕಬಸೆ, ಕಾಶೀನಾಥ, ಡಾ| ಲೋಕೇಶ ಹಿರೇಮಠ, ಶಾಮರಾವ್ ಹಲಮಡಗೆ, ಸಚ್ಚಿದಾನಂದ ಚಿದ್ರೆ, ಕಂಟೆಪ್ಪ ಪಾಟೀಲ, ಶಿವಕುಮಾರ ಸ್ವಾಮಿ, ಶರಣಪ್ಪ ಚಿಮಕೊಡೆ, ಬಂಡೆಪ್ಪ ಗಿರಿ, ನಾಗಶೆಟ್ಟಿ ಧರಂಪೂರ, ಚಂದ್ರಕಾಂತ ಅಷ್ಟುರೆ, ಗಜೇಂದ್ರ ಗಿರಿ, ನಾಗಶೆಟ್ಟಿ ಪಾಟೀಲ ವಾಲದೊಡ್ಡಿ, ಮಲ್ಲಿಕಾರ್ಜುನ್ ಬಸಂತಪುರೆ, ಎಸ್.ಬಿ. ಕುಚಬಾಳ, ಲಕ್ಷ್ಮಣರಾವ್ ಕಾಂಚೆ, ಸುಭಾಷ ಬಸಂತಪುರೆ, ಶ್ರೀಕಾಂತ ಸ್ವಾಮಿ ಸೋಲಪೂರ, ಭಾರತಿ ಕೊಡಂಬಲ ಇದ್ದರು.