ಬೀದರ: ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಹಡಪದ ಸಮಾಜದ ಏಳ್ಗೆಗೆಗೆ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ನಗರದ ಜಿಲ್ಲಾ ರಂಗಮಂದಿದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸ್ವಾವಲಂಬನೆಯ ಜೀವನ ನಡೆಸಬೇಕು. ತಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡು, ಉನ್ನತ ಹುದ್ದೆಗಳನ್ನು ಹೊಂದಲು ಪ್ರೋತ್ಸಾಹ ನೀಡಬೇಕು. ಹಿಂದುಳಿದವರ ಏಳ್ಗೆಗೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಕ್ಕೆ ತರುತ್ತಿವೆ. ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಅಕ್ಕಮಹಾದೇವಿ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಎಸ್.ಜಿ.ಹುಗ್ಗಿ ಪಾಟೀಲ ಉಪನ್ಯಾಸ ನೀಡಿ, ಹಡಪದ ಸಮಾಜವು 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಹಲವು ದೇಶಗಳಲ್ಲಿ ಶಿವಶರಣ ಅಪ್ಪಣ್ಣನವರನ್ನು ಗುರುಗಳಾಗಿ ಪರಿಗಣಿಸಲಾಗುತ್ತದೆ. ಇವರು 18 ಪುರಾಣಗಳನ್ನು ಓದಿ ಸುಮಾರು 300 ವಚನಗಳನ್ನು ನೀಡಿದ್ದಾರೆ. ಬಸವಣ್ಣನವರ ಮಾರ್ಗವನ್ನು ಅನುಸರಿಸಿದ ಇವರು ಅನುಭವ ಮಂಟಪದ ಆಧಾರ ಸ್ತಂಭವಾಗಿದ್ದರು ಎಂದು ಬಣ್ಣಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣ ಈಶ್ವರ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಮುಖಂಡರಾದ ಪಂಡಿತರಾವ್ ಚಿದ್ರಿ, ಅಮೃತರಾವ್ ಚಿಮಕೊಡೆ, ಪ್ರಭುರಾವ್ ತರನಳ್ಳಿ, ಸಂಗಮೇಶ ಎಣಕೂರ, ಸುಭಾಷ ಹಳ್ಳಿಖೇಡ ಹಾಗೂ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನಿಯರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪುಷ್ಪಮನಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.