Advertisement

ಹಸಿರು ಹೆಚ್ಚಿಸಲು ಪರಿಸರ ಕಾಳಜಿ ಬೆಳೆಸಿಕೊಳ್ಳಿ: ಪೂಜಾರಿ

03:15 PM Jul 13, 2019 | Naveen |

ಬೀದರ: ಪರಿಸರವನ್ನು ಹಸಿರಾಗಿಸಲು ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರಿಸರ ಸ್ನೇಹಿಯಾಗಿ ಗಿಡ-ಮರಗಳ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಇಂದಿರಾಬಾಯಿ ಗುರುತಪ್ಪಾ ಶೆಟಕಾರ ಪ್ರೌಢಶಾಲೆಯ ಮುಖ್ಯಗುರು ಲಕ್ಷ್ಮಣ ಪೂಜಾರಿ ಹೇಳಿದರು.

Advertisement

ನಗರದ ಹೊರವಲಯದ ಶಾಹಾಪುರ್‌ ಗೇಟ್ ಸಮೀಪದ ನರ್ಸ್‌ರಿಯಲ್ಲಿ ಪ್ರಾದೇಶಿಕ ಅರಣ್ಯ ವಲಯದಿಂದ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ ‘ಬೀಜದ ಉಂಡೆ ತಯಾರಿಕೆ ಹಾಗೂ ಬಿತ್ತನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಕೈಗಾರಿಕೆ ವಿಸ್ತರಣೆ, ನಿವೇಶನ, ಜಮೀನು ವಿಸ್ತರಣೆ, ರಸ್ತೆಗಳ ವಿಸ್ತರಣೆ, ವಿದ್ಯುತ್‌ ಮಾರ್ಗ ಇನ್ನೂ ಮುಂತಾದ ಹಲವು ಕಾರಣಗಳಿಂದ ಪ್ರತಿ ವರ್ಷ ಕಾಡು ಕಡಿಮೆಯಾಗುತ್ತಿದೆ. ನಮ್ಮ ಆಸುಪಾಸಿನಲ್ಲಿರುವ ಖಾಲಿ ಜಾಗದಲ್ಲಿ ನಾವು ಗಿಡಮರಗಳನ್ನು ನೆಡುವ ಮೂಲಕ ಅರಣ್ಯೀಕರಣ ಹೆಚ್ಚಾಗಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾಲೂಕಿನ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಜಮೀರ್‌ ಅಹ್ಮದ್‌ ಮಾತನಾಡಿ, ಬೀಜದ ಉಂಡೆ ಪದ್ಧತಿ ಜಪಾನ್‌, ಜರ್ಮನಿಯಲ್ಲಿ ಜನಪ್ರಿಯವಾಗಿದೆ. ಗಿಡ-ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ಅಲ್ಲಿ ಸರಕಾರದ ವತಿಯಿಂದಲೇ ಸೀಡ್‌ಬಾಲ್ ತಯಾರಿಸಿ ಮಳೆ ಸುರಿಯುವ ವೇಳೆ ಖಾಲಿ ಜಾಗ, ಅರಣ್ಯದಲ್ಲಿ ಬಿತ್ತಲಾಗುತ್ತದೆ. ಕೆರೆ ದಂಡೆ, ಖಾಲಿ ಭೂಮಿ, ನದಿ, ಹೊಲಗಳ ಪಕ್ಕದಲ್ಲಿ ಸೇರಿದಂತೆ ವಿವಿಧೆಡೆ ಬೀಜದ ಉಂಡೆ ಬಿತ್ತನೆ ಮಾಡಿದರೆ ಮಳೆ ನೀರಿನಿಂದಲೇ ಉತ್ತಮ ಗಿಡವಾಗಿ ಬೆಳೆಯುತ್ತವೆ ಎಂದರು.

ಬೇರೆ ಬೇರೆ ಜಾತಿಯ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ಸೀಡ್‌ಬಾಲ್ ತಯಾರಿಸಲಾಗುತ್ತದೆ. ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣು ಬಳಸಬಹುದಾಗಿದೆ. ಮೂರು ಭಾಗದಷ್ಟು ಮಣ್ಣಿಗೆ ಒಂದು ಭಾಗದಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಬೇಕು. ತೇವಾಂಶ ಆಧರಿಸಿ ಉಂಡೆ ತಯಾರಿಸಲು ನೀರು ಉಪಯೋಗಿಸಿಕೊಳ್ಳಬಹುದು. ಆರೋಗ್ಯಕರ ಬೀಜಗಳನ್ನು ಆಯ್ಕೆ ಮಾಡಿ ಉಂಡೆಯ ಮಧ್ಯಭಾಗದಲ್ಲಿ ಬರುವ ಹಾಗೆ ಬಿಗಿಯಾಗಿ ಚೆಂಡಿನ ಆಕಾರದಲ್ಲಿ ಉಂಡೆ ತಯಾರಿಸಬೇಕು. ಉಂಡೆ ಗಟ್ಟಿಯಾಗಿ ಅಂಟಿಕೊಳ್ಳಲು ಸ್ವಲ್ಪ ಜೇಡಿಮಣ್ಣು ಬಳಸಬಹುದಾಗಿದೆ. ಹೊಂಗೆ, ಹುಣಸೆ, ಕರಿಬೇವು, ಹರಳು, ಅಂಡುವಾಳ, ತಾರೆಕಾಯಿ, ಮಾವು, ಕಾಡಿನ ಮರದ ಆರೋಗ್ಯಕರ ಬೀಜಗಳನ್ನು ಸೀಡ್‌ಬಾಲ್ನಲ್ಲಿ ತುಂಬಬಹುದು ಎಂದರು.

ತಯಾರಿಸಿದ ಬೀಜದ ಉಂಡೆಯನ್ನು ಒಂದೆರಡು ದಿನಗಳ ಕಾಲ ಬಿಸಿನಲ್ಲಿ ಒಣಗಿಸಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ಬಿತ್ತುವುದು ಉತ್ತಮ. ಬೀಜ ಮೊಳಕೆಯೊಡೆದ ಬಳಿಕ ಉಂಡೆಯ ಜತೆಗಿದ್ದ ಗೊಬ್ಬರದ ಪೋಷಕಾಂಶ ಬಳಸಿಕೊಂಡು ಸದೃಢವಾಗಿ ಬೆಳೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸತ್ಯವಾನ ಭೋಸ್ಲೆ, ನಾಗಪ್ಪ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next