ಬೀದರ: ಪ್ರಸಿದ್ಧ ವಿಜ್ಞಾನಿಗಳ ಕೊಡುಗೆಯಿಂದ ಭಾರತ ಈಗ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ರಾಜ್ಯ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ ಹೇಳಿದರು.
ಜಿಲ್ಲಾ ವಿಜ್ಞಾನ ಶಿಕ್ಷಕರ ವೇದಿಕೆ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಆಶ್ರಯದಲ್ಲಿ ನಗರದ ಗುರಯ್ಯ ಬಚ್ಚಾ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಪನ್ಯಾಸ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಕಲಾಲ ದೇವಿಪ್ರಸಾದ ಮಾತನಾಡಿ, 1928ರ ಫೆ. 28ರಂದು ಸರ್ ಸಿ.ವಿ. ರಾಮನ್ ಅವರು ರಾಮನ್ ಪರಿಣಾಮ ಅವಿಷ್ಕರಿಸಿದ ದಿನ. ಸಿ.ವಿ. ರಾಮನ್ ಅವರು ಕೇವಲ 10 ಅಡಿ ಸುತ್ತಳತೆ ಕೋಣೆಯಲ್ಲಿ ಈ ಸಾಧನೆ ಮಾಡಿದ ಮಹತ್ವದ ದಿನ. ಸಾಧನೆ ಮಾಡಲು ಮಕ್ಕಳು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಗಿದಾಗ ಹಾಗೂ ಏಕೆ? ಹೇಗೆ? ಎಂಬ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಸಂಜೀವಕುಮಾರ ಸ್ವಾಮಿ ಮಾತನಾಡಿ, ಮಕ್ಕಳು ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಜಗದೀಶ ಚಂದ್ರ ಬೋಸ್, ಹರಗೋವಿಂದ ಖುರಾನಾ, ವಿಕ್ರಮ ಸಾರಾಭಾಯಿ, ಚರಕ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಆದರ್ಶಗಳಾದ ಆತ್ಮವಿಶ್ವಾಸ, ಸಾಧಿಸುವ ಛಲ, ಶ್ರೇಷ್ಠ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತತ ಪ್ರಯತ್ನದಿಂದ ಕಾರ್ಯರೂಪಕ್ಕೆ ತಂದಾಗ ಮಾತ್ರ ಮಕ್ಕಳು ಜೀವನದಲ್ಲಿ ಹೊಸ ಸಾಧನೆ ಮಾಡಲು ಸಾಧ್ಯ. ಇದರಿಂದ ಭಾರತ ವಿಶ್ವದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ನಿರ್ಮಿಸಲು ಮಕ್ಕಳು ತಮ್ಮ ಅಳಿಲು ಸೇವೆ ಸಲ್ಲಿಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ರಫಿ ತಾಳಿಕೋಟಿ ಮಾತನಾಡಿ, ವಿಜ್ಞಾನದಿಂದಲೇ ರಾಷ್ಟ್ರ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಸಿ.ವಿ. ರಾಮನ್ ಅವರ ಕೊಡುಗೆಯಿಂದ ಭಾರತ ವಿಶ್ವದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಉತ್ತುಂಗ ಶಿಖರ ತಲುಪಿದೆ. ಭಾರತದಲ್ಲಿ ವಿಜ್ಞಾನಿಗಳ ಸಂಖ್ಯೆ ಕೇವಲ ಶೇ. 3ರಷ್ಟು ಇದೆ. ಆದ್ದರಿಂದ ಮಕ್ಕಳು ವಿಜ್ಞಾನಿಗಳಾಗುವ ಧ್ಯೇಯದೊಂದಿಗೆ ಪ್ರಯತ್ನ ಮಾಡಿದಾಗ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾವೇರಿ ಬಾಳಪ್ಪ, ದ್ವಿತೀಯ ಪಡೆದ ವೈಷ್ಣವಿ ದೇವಿದಾಸ, ತೃತೀಯ ಸ್ಥಾನ ಪಡೆದ ಸತೀಶ ಚಂದ್ರಕಾಂತ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಿಕ್ಷಕರಾದ ಕರಬಸಪ್ಪ, ಅನೀಲಕುಮಾರ, ಶಾಮರಾವ, ಮಹಾದೇವಿ, ಸುನಿತಾ ಹಾಗೂ ಲಕ್ಷ್ಮೀ ವಿದ್ಯಾರ್ಥಿಗಳು ಇದ್ದರು.