ದುರ್ಯೋಧನ ಹೂಗಾರ
ಬೀದರ: ಕಳೆದ ಎರಡು ವರ್ಷಗಳಿಂದ ನಿರಂತರ ಮಳೆ ಕೊರತೆ ಎದುರಿಸಿದ ಬೀದರ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಸಹ ಶೇ. 30ರಷ್ಟು ಮಳೆ ಕೊರತೆ ಕಾಡುತ್ತಿದೆ. ಅಲ್ಲದೆ, ಜಿಲ್ಲೆಯ ಬಹುತೇಕ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಕಾರಂಜಾ ಜಲಾಶಯಕ್ಕೂ ಅರ್ಧ ಟಿಎಂಸಿ ಅಡಿ ನೀರು ಕೂಡ ಹರಿದು ಬಾರದ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ.
ಜನವರಿ ತಿಂಗಳಿಂದ ಈ ವರೆಗೆ ಸರಾಸರಿ 800 ಮಿಮೀ ಮಳೆಯಾಗಬೇಕಿತ್ತು. ಆದರೆ, 559 ಮಿಮೀ ಮಳೆಯಾಗಿದೆ. ಸರಾಸರಿ ಶೇ.30ರಷ್ಟು ಕಡಿಮೆ ಮಳೆ ಸುರಿದಿದೆ. ಈ ವರ್ಷದ ಮುಂಗಾರಿನಿಂದ ನೋಡುವುದಾದರೆ, ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಸರಾಸರಿ 684 ಮಿಮೀ ಮಳೆ ಆಗಬೇಕಿತ್ತು.
ಆದರೆ, 510 ಮಿಮೀ ಮಳೆಯಾಗಿದೆ. ಸರಾಸರಿ ಶೇ. 25ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೆ, ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗಿದೆ. ತೆರೆದ ಮತ್ತು ಕೊಳವೆ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ಮಳೆ ನೀರು ಹರಿದು ಬಂದಿಲ್ಲ: ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ ನೀರು ಕಾರಂಜಾ ಜಲಾಶಯಕ್ಕೆ ಹರಿದು ಬಂದಿಲ್ಲ. ಅಲ್ಲದೆ ತೆಲಂಗಾಣ ಭಾಗದಿಂದ ಕೂಡ ನೀರು ಹರಿದು ಬಾರದ ಕಾರಣ ಸದ್ಯ ಜಲಾಶಯದಲ್ಲಿ ಪ್ರಮಾಣ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿದ ಮಳೆ ನೀರನ್ನು ಭೂಮಿ ಹೀರಿಕೊಳ್ಳುತ್ತಿದೆ. ಮಳೆ ನೀರು ಹರಿದು ಮುಂದೆ ಸಾಗಿಲ್ಲ ಎಂಬುದು ಕಾರಂಜಾ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಎರಡು ವರ್ಷ ನಿರಂತರ ಮಳೆ ಇಲ್ಲದ ಕಾರಣ ಭೂಮಿ ಹೆಚ್ಚಿನ ನೀರು ಹೀರಿಕೊಳ್ಳುತ್ತಿದೆ. ಅಲ್ಲದೆ, ವಿವಿಧಡೆ ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳಲ್ಲಿ ನೀರು ನಿಂತಿದೆ. ಆದರೆ ಕಾರಂಜಾ ವರೆಗೆ ಹರಿದು ಬರದ ಕಾರಣ ಒಳ ಹರಿವು ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕುಡಿಯುವ ನೀರಿನ ಸಮಸ್ಯೆ: ಪ್ರಸಕ್ತ ಸಾಲಿನಲ್ಲಿ ಕೂಡ ಒಳ ಹರಿವು ಬಾರದ ಹಿನ್ನೆಲೆಯಲ್ಲಿ ಕಾರಂಜಾ ನೀರು ಪಡೆಯುತ್ತಿರುವ ಬೀದರ, ಹುಮನಾಬಾದ, ಚಿಟಗುಪ್ಪ, ಭಾಲ್ಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಂದಿನ ಬೇಸಿಗೆಯಲ್ಲಿ ಭಾರಿ ಪ್ರಮಾಣದ ಕೊರತೆ ಕಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಸದ್ಯಕ್ಕೆ ಕಾರಂಜಾ ಜಲಾಶಯದಲ್ಲಿ 1.302 ಟಿಎಂಸಿ ಅಡಿ ನೀರು ಲಭ್ಯ ಇದ್ದು, ಈ ಪೈಕಿ 0.927 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಬರುತ್ತದೆ. ಈ ವರ್ಷದಲ್ಲಿ ಒಟ್ಟಾರೆ 0.228 ಟಿಎಂಸಿ ಅಡಿ ನೀರು ಮಾತ್ರ ಜಲಾಶಯಕ್ಕೆ ಒಳ ಹರಿವು ಬಂದಿದೆ. ಹಳೆ ಮೂಲಗಳಿಂದ ನೀರು: ಬೀದರ, ಹುಮನಾಬಾದ, ಭಾಲ್ಕಿ, ಚಿಟಗುಪ್ಪ, ಹಳ್ಳಿಖೇಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ಹಿಂದೆ ಪೂರೈಸುತ್ತಿದ್ದ ತೆರೆದ ಬಾವಿ, ಕೊಳವೆ ಬಾವಿಗಳ ನೀರು ಸರಬರಾಜಿಗೆ ಆಯಾ ಪುರಸಭೆಗಳು, ಗ್ರಾಪಂಗಳು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಕಳೆದ ವರ್ಷ ಎಲ್ಲ ಕಡೆಗಳಲ್ಲಿನ ನೀರಿನ ಮೂಲಗಳಿರುವ ತೆರೆದ ಬಾವಿಗಳ ಹೂಳು ಎತ್ತುವ ಕೆಲಸ ಮಾಡಲಾಗಿದೆ. ಇದೀಗ ಒಡೆದ ಪೈಪ್‌ಲೈನ್ ದುರಸ್ತಿ, ಕಳೆದುಹೋದ ಮೋಟಾರ್‌ಗಳ ಪತ್ತೆ ಹಚ್ಚುವ ಮೂಲಕ ವಿವಿಧ ಕೆಲಸ ಪೂರ್ಣಗೊಳಿಸಿ ನೀರಿನ ಕೊರತೆ ಉಂಟಾದಂತೆ ನೋಡಿಕೊಳ್ಳಬೇಕಾದ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಾಗಿದೆ.