ಬೀದರ: ದೇಶ ಹಾಗೂ ರಾಜ್ಯದ ವಿವಿಧೆಡೆ ಭಾರಿ ಮಳೆ ಸುರಿಸುಯುತ್ತಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಜಲಾಶಯಗಳು ತುಂಬಿ ಹರಿಯುತ್ತಿವೆ. ಆದರೆ, ಬೀದರ ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಮಾತ್ರ ಸೂಕ್ತ ಪ್ರಮಾಣದ ಒಳ ಹರಿವು ಬರದೇ ಸೊರಗುತ್ತಿದ್ದು, ಈ ವರ್ಷವೂ ಕಾರಂಜಾ ಜಲಾಶಯ ಭರ್ತಿಯಾಗುವುದು ಅನುಮಾನ ಎಂಬಂತಾಗಿದೆ.
Advertisement
ಕೆಲ ದಿನಗಳಿಂದ ರಾಜ್ಯದ ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಪ್ರಭಾವ ಮುಂದುವರಿದಿರುವುದರಿಂದ ಕಾವೇರಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುವ ಸ್ಥಿತಿಗೆ ಬಂದಿವೆ. ಆದರೆ, ಗಡಿ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದೆ. ಆದರೂ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಆ.2ರಂದು ಸುರಿದ ಮಳೆಯಿಂದ ಕಾರಂಜಾ ಜಲಾಶಯಕ್ಕೆ 57.87 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಒಟ್ಟಾರೆ ಈ ವರ್ಷದ ಮುಂಗಾರಿನಲ್ಲಿ ಕಾರಂಜಾ ಜಲಾಶಯಕ್ಕೆ ಕೇವಲ 0.093 ಟಿಎಂಸಿ ನೀರು ಒಳ ಹರಿವು ಬಂದಿದೆ.
Related Articles
Advertisement
ಜಲಾಶಯದಲ್ಲಿರುವ ನೀರಿನ ಪ್ರಮಾಣ: ಕಾರಂಜಾ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 7.691 ಟಿಎಂಸಿಯಾಗಿದ್ದು, ಸಧ್ಯ 1.257 ಟಿಎಂಸಿಯಷ್ಟು ಮಾತ್ರ ನೀರಿದೆ. ಈ ಪೈಕಿ 0.375 ಟಿಎಂಸಿ ನೀರು (ಡೆಡ್ ಸ್ಟೋರೆಜ್) ಬಳಕೆಗೆ ಯೋಗ್ಯವಲ್ಲದ ನೀರಾಗಿದ್ದು, 0.882 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ ಎಂದು ಅಧಿಕಾರಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. 2019ರ ಮುಂಗಾರಿನಲ್ಲಿ ಒಟ್ಟಾರೆ, 0.093 ಟಿಎಂಸಿ ನೀರು ಮಾತ್ರ ಒಳ ಹರಿವು ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಜಿಲ್ಲೆಯ ವಿವಿಧೆಡೆ ಕುಡಿವ ನೀರಿಗೆ ಸಮಸ್ಯೆ ಉಲ್ಬಣಗೊಳ್ಳಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಎಲ್ಲಿ ಎಷ್ಟು ನೀರು ಪೂರೈಕೆ?: ಹುಮನಾಬಾದ, ಚಿಟಗುಪ್ಪ ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ಪ್ರತಿವರ್ಷ 0.300 ಟಿಎಂಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಭಾಲ್ಕಿ ಪಟ್ಟಣ ಸೇರಿದಂತೆ ಇತರೆ ಗ್ರಾಮಗಳಿಗೆ 0.300 ಟಿಎಂಸಿ ನೀರು, ಬೀದರ ನಗರಕ್ಕೆ 0.387 ಟಿಎಂಸಿ ಹಾಗೂ ಇತರೆ ಗ್ರಾಮಗಳಿಗೆ 0.183 ಟಿಎಂಸಿ ನೀರನ್ನು ಪೂರೈಸಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಕನಿಷ್ಟ 1.17 ಟಿಎಂಸಿಯಷ್ಟು ನೀರು ಜಲಾಶಯದಿಂದ ಜಿಲ್ಲೆಯ ಜನರಿಗೆ ಪೂರೈಸಲಾಗುತ್ತಿದೆ. ಆದರೆ, ಸದ್ಯಕ್ಕೆ 0.882 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿರುವುದು ನೋಡಿದರೆ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಕುಡಿವ ನೀರಿನ ಆಭಾವ ಉಂಟಾಗುವ ಸಾಧ್ಯತೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.