ಬೀದರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದ್ದು, ಜನರು ಪ್ರತಿದಿನ ಸಂಕಟ ಪಡುವಂತಾಗಿದೆ. ಆದರೆ, ಗಡಿ ಜಿಲ್ಲೆ ಬೀದರನಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇಂದಿಗೂ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಮಳೆಗಾಲದಲ್ಲಿ ಕೂಡ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆಯೇ ಎಂಬ ವಿಷಯ ತಿಳಿದು ಜನರಿಗೆ ಆಘಾತ ಉಂಟಾಗಬಹುದು. ಆದರೆ ಇದು ವಾಸ್ತವ ಸಂಗತಿಯಾಗಿದೆ. ಈ ವರ್ಷ ಜನವರಿ ತಿಂಗಳಿಂದ ಆಗಸ್ಟ್ 8ರ ವರೆಗೆ ಸರಾಸರಿ 436 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 317 ಮಿ.ಮೀ. ಮಳೆಯಾಗಿದ್ದು, ಶೇ.27 ಮಳೆ ಕೊರತೆ ಜಿಲ್ಲೆಗೆ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಅಂತರ್ಜಲ ಪಾತಾಳ ಕಂಡಿತ್ತು. ಇದೀಗ ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆದರೂ ಕೂಡ ಅಂತರ್ಜಲ ಸುಧಾರಿಸುವ ಲಕ್ಷಣಗಳು ಇಂದಿಗೂ ಗೋಚರಿಸುತ್ತಿಲ್ಲ. ಹಾಗಂತ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿಲ್ಲ ಎಂದಲ್ಲ. ನಿರಂತರ ತುಂತುರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಸರಾಸರಿ 109 ಮಿ.ಮೀ. ಮಳೆಯಾಗಿದೆ. ಆದರೂ ಕೂಡ ಬೇಸಿಗೆಯಲ್ಲಿ ಒಣಗಿದ ತೆರೆದ ಬಾವಿಗಳು ಹಾಗೂ ಕೊಳವೆ ಬಾವಿಗಳಿಗೆ ನಿಗದಿತ ಪ್ರಮಾಣದ ನೀರು ಬಂದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಬೆಳೆಗೆ ಉತ್ತಮ ಆಹಾರ ನೀಡುತ್ತಿದೆ ಹೊರತು ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡುವಂತೆ ಆಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಸದ್ಯ ಸುರಿದ ಮಳೆ ಭೂಯಿಯ ಆಳದ ವರೆಗೆ ಇಳಿದಿಲ್ಲ. ಕೇವಲ ಮೂರರಿಂದ ನಾಲ್ಕು ಅಡಿ ಮಾತ್ರ ಭೂಮಿಯಲ್ಲಿ ತೆಂವಾಶ ಕಂಡುಬರುತ್ತಿದೆ ಎಂದು ಗ್ರಾಮೀಣ ಜನರು ಹೇಳುತ್ತಿದ್ದಾರೆ.
ಕಾರಂಜಾ ಜಲಾಶಯ: ಆ.8ರ ವರೆಗೆ ಸುರಿದ ಮಳೆಯಿಂದ ಕಾರಂಜಾ ಜಲಾಶಯಕ್ಕೆ 0.143 ಟಿಎಂಸಿ ನೀರು ಒಳ ಹರಿವು ಬಂದಿದೆ. ಆ.7 ಬುಧವಾರ ಸುರಿದ ಮಳೆಗೆ 57.87 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. 1.307 ಟಿಎಂಸಿ ನೀರು ಜಲಾಶಯದಲ್ಲಿ ಇದ್ದು, 0.932 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿದೆ ಎಂದು ಕಾರಂಜಾ ಅಧಿಕಾರಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.
ತಾಲೂಕುವಾರು ಮಳೆ: ಒಂದು ವಾರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಆ.1ರಿಂದ ಆ.8ರ ಬೆಳಗ್ಗೆ 8 ಗಂಟೆ ವರೆಗೆ ಔರಾದ ತಾಲೂಕಿನಲ್ಲಿ 80 ಮಿ.ಮೀ., ಬೀದರ ತಾಲೂಕಿನಲ್ಲಿ 109 ಮಿ.ಮೀ., ಭಾಲ್ಕಿ 87 ಮಿ.ಮೀ., ಬಸವಕಲ್ಯಾಣ 125 ಮಿ.ಮೀ., ಹುಮನಾಬಾದ 125 ಮಿ.ಮೀ. ಮಳೆಯಾಗಿದೆ. ವರ್ಷದ ಮಳೆಯ ಆಧಾರದಲ್ಲಿ ನೋಡುವುದಾದರೆ ಈ ವರೆಗೆ ಔರಾದ ತಾಲೂಕಿನಲ್ಲಿ ಶೇ.35, ಬೀದರ ತಾಲೂಕಿನಲ್ಲಿ ಶೇ.35, ಭಾಲ್ಕಿ ತಾಲೂಕಿನಲ್ಲಿ ಶೇ.32, ಬಸವಕಲ್ಯಾಣ ತಾಲೂಕಿನಲ್ಲಿ ಶೇ.13, ಹುಮನಾಬಾದ ತಾಲೂಕಿನಲ್ಲಿ ಶೇ.20ರಷ್ಟು ಮಳೆ ಕೊರತೆ ಇದೆ.
ಮೋಡ ಕವಿದ ವಾತಾವರಣ: ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಆದರೆ, ಭಾರಿ ಪ್ರಮಾಣದಲ್ಲಿ ಮಾತ್ರ ಮಳೆ ಸುರಿಯುತ್ತಿಲ್ಲ. ಆಗಾಗ ತುಂತುರು ಮಳೆಯಾಗುತ್ತಿದ್ದು, ಬೆಳೆಗಳಿಗೆ ಉತ್ತಮ ಶಕ್ತಿ ತುಂಬುತ್ತಿದೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲೆಯ ವಿವಿಧೆಡೆ ಬೆಳೆಗಳು ಉತ್ತಮವಾಗಿ ಬೆಳೆಯುತ್ತದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ಈ ವರ್ಷ ಉತ್ತಮ ಫಸಲು ಬರುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.