Advertisement

ಬೆಂಬಲ ಬೆಲೆ ಸಮಸ್ಯೆ ನಿವಾರಣೆಗೆ ಯತ್ನ

04:37 PM Nov 20, 2019 | Naveen |

ಬೀದರ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಸ್ವಲ್ಪಮಟ್ಟಿಗೆ ಇದರಿಂದ ತೊಂದರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ತೊಂದರೆಗಳನ್ನು ನಿವಾರಣೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಎಪಿಎಂಸಿ ಅಧ್ಯಕ್ಷ ಅನೀಲಕುಮಾರ ಪನ್ನಾಳೆ ಹೇಳಿದರು.

Advertisement

ನಗರದ ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘದಲ್ಲಿ ಸಹಕಾರ ಸಪ್ತಾಹದ 6ನೇ ದಿನ ಹಮ್ಮಿಕೊಂಡಿದ್ದ “ಯುವಜನ, ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಿಯಾದ ಮಾರ್ಗವನ್ನು ಹುಡುಕಿ ರೈತರಿಗೆ ಸಹಾಯಮಾಡಲು ಪ್ರಯತ್ನಿಸುತ್ತೇವೆ ಎಂದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಜವಾಹರಲಾಲ್‌ ನೆಹರು ಅವರು ಸಹಕಾರ ಚಳುವಳಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸುವ ಸಂಕೇತವಾಗಿ ಅವರು ಜನ್ಮದಿನದಂದು ಸಪ್ತಾಹದ ಉದ್ಘಾಟನೆ ಮಾಡಲಾಗುತ್ತಿದೆ. ಸ್ವಸಹಾಯ ಗುಂಪಿನ ಮೂಲಕ ಎಲ್ಲ ವರ್ಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳುಸುವುದು ಮತ್ತು ನಿರುದ್ಯೋಗಿಗಳಿಗೆ, ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ತರಬೇತಿ ಸಂಸ್ಥೆಗಳನ್ನು ಡಿಸಿಸಿ ಬ್ಯಾಂಕ್‌ ಮೂಲಕ ನಡೆಸುತ್ತಾ ಬರಲಾಗಿದೆ. ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಎಡಮಲ್ಲೆ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಎಲ್ಲ ರಂಗದಲ್ಲೂ ಶೇ. 33 ಸ್ಥಾನ ಮಹಿಳೆಯರಿಗೆ ಮೀಸಲಾತಿ ಇದೆ. ಮಹಿಳೆಯರ ಉನ್ನತೀಕರಣಕ್ಕೆ ಚಿಂತನೆ ಮಾಡಬೇಕಾಗಿದೆ. ಪ್ರತಿಯೊಂದು ಸಹಕಾರ ಸಂಘದಲ್ಲಿ 2 ಸ್ಥಾನ ಮಹಿಳೆಯರಿಗೆ  ಮಿತವಾಗಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗಬೇಕು ಹಾಗೂ ಆ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಅಶೋಕರಾವ್‌ ಮುಳೆ, ಸಂಘದ ಮಾಜಿ ಅಧ್ಯಕ್ಷ ಶಾಲಿವಾಹ ಶಂಕ್ರೆಪ್ಪ ಮಾತನಾಡಿದರು. ಸಹಾರ್ದ ನಿರ್ದೇಶಕ ಸುಬ್ರಮಣ್ಯಂ ಪ್ರಭು ಇದ್ದರು. ಉಮಾಕಾಂತ ಮಲ್ಲಿಕಾರ್ಜುನ, ಪರಮೇಶ್ವರ ಮುಗಟೆ, ನೀಲಾಂಜನ ಮತ್ತಿತರರು ಇದ್ದರು. ಎಚ್‌.ಆರ್‌. ಮಲ್ಲಮ್ಮ ನಿರೂಪಿಸಿದರು. ಮಲ್ಲಿಕಾರ್ಜುನ ಸದಾಶಿವ ವಂದಿಸಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next