Advertisement

ಬೆಳೆ ಸಾಲ ವಿತರಣೆಗೆ ಒತ್ತು ನೀಡಿ

10:30 AM Jul 11, 2019 | Team Udayavani |

ಬೀದರ: ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಸಮರ್ಪಕ ರೀತಿಯಲ್ಲಿ ಬೆಳೆ ಸಾಲ ವಿತರಣೆಗೆ ಒತ್ತು ಕೊಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಖ ಅಧಿಕಾರಿ ಮಹಾಂತೇಶ ಬೀಳಗಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಸಲಹಾ ಸಮಿತಿ (ಡಿಸಿಸಿ) ಮತ್ತು ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ (ಡಿಎಲ್ಆರ್‌ಸಿ) ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ಸಾಲ ಗುರಿ ಸರಿಯಾದ ರೀತಿಯಲ್ಲಿ ತಲುಪಲು ಆಗಿಲ್ಲ. ಇಲ್ಲಿವರೆಗೆ ಅರ್ಧ ಮಾತ್ರ ಸಾಧನೆಯಾಗಿದೆ. ಮುಂದಿನ ವರ್ಷ ಶೇ.70ರಷ್ಟು ಗುರಿ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.

ಬೆಳೆ ಸಾಲ ಹೆಚ್ಚಿಗೆ ಮಾಡಿ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ ರೈತರಿಗೆ ಬ್ಯಾಂಕ್‌ಗಳಿಂದ ಸರಿಯಾದ ರೀತಿಯಲ್ಲಿ ಸಾಲ ವಿತರಣೆಯಾಗಬೇಕು. ಈ ನಿಟ್ಟಿನಲ್ಲಿ ಸಾಲ ಕೊಡಿ ಎಂದು ಕೇಳಿ ಬ್ಯಾಂಕ್‌ಗೆ ಬರುವ ರೈತರಿಗೆ ಸರಿಯಾದ ಮಾಹಿತಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಬೆಳೆಸಾಲ ಮನ್ನಾ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ ಒಟ್ಟು 53,500 ರೈತರು ಅರ್ಹ ಫಲಾನುಭವಿಗಳಾಗಿದ್ದಾರೆ. ಈ ಪೈಕಿ ಇಲ್ಲಿವರೆಗೆ 11,785 ರೈತರ 43.20 ಕೋಟಿ ರೂ.ನಷ್ಟು ಸಾಲ ಮನ್ನಾ ಮಾಡಲಾಗಿದೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಿ.ಎಂ. ಕಮತಗಿ ಸಭೆಗೆ ಮಾಹಿತಿ ನೀಡಿದರು.

Advertisement

ಡಿಸಿಸಿ ಬ್ಯಾಂಕ್‌ ಬೀದರ, ಶಾರದಾ ಆರ್‌ಸೆಟಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆಯವರು ನಿರುದ್ಯೋಗಿಗಳಿಗೆ ಹಲವಾರು ತರಬೇತಿ ಅವಕಾಶ ಕಲ್ಪಿಸುತ್ತಾರೆ. ಆ ತರಬೇತಿಯನ್ನು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಾರೆ. ನಿಜಕ್ಕೂ ಇದು ಒಳ್ಳೆಯ ಪ್ರಯತ್ನ. ಈ ವಿಷಯಕ್ಕೆ ವಾರ್ತಾ ಇಲಾಖೆಯಿಂದ ಉತ್ತಮ ರೀತಿಯಲ್ಲಿ ಪ್ರಚಾರ ಆಗಬೇಕು. ಅವರು ನೀಡುವ ತರಬೇತಿ ಮಾಹಿತಿ ಜಿಲ್ಲೆಯ ನಿರುದ್ಯೋಗಿಗಳಿಗೆ ತಲುಪುವಂತಾಗಬೇಕು ಎಂದು ಸಿಇಒ ವಾರ್ತಾಧಿಕಾರಿಗೆ ಸೂಚಿಸಿದರು.

ಆರ್‌ಬಿಐ ಬೆಂಗಳೂರಿನ ಬಾಲಚಂದ್ರ ಎ.ವಿ., ನಬಾರ್ಡ್‌ನ ರಾಮರಾವ್‌ ಏಕಬೋಟೆ, ಕೃಷ್ಣ ಪ್ರಗತಿ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಸಾಹೇಬಗೌಡ ಮೂಲಿಮನಿ, ಬೀದರ ಡಿಸಿಸಿ ಬ್ಯಾಂಕ್‌ ಸಿಇಒ ಮಲ್ಲಿಕಾರ್ಜುನ ಮಹಾಜನ್‌ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next