ಶಶಿಕಾಂತ ಬಂಬುಳಗೆ
ಬೀದರ: ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಿಂದ ಅಡುಗೆ ಮನೆ ದುಬಾರಿಯಾಗುತ್ತಿದ್ದರೆ, ಮತ್ತೂಂದೆಡೆ ಸಿಲಿಂಡರ್ ಸಾಗಾಣಿಕೆ (ಡೋರ್ ಡಿಲೆವರಿ) ಶುಲ್ಕ ವಸೂಲಿ ಹೆಸರಿನಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಗ್ಯಾಸ್ ಏಜೆನ್ಸಿಗಳು ಹಗಲು ದರೋಡೆಗೆ ಇಳಿದಿರುವುದು ಗ್ರಾಹಕರನ್ನು ತತ್ತರಿಸುವಂತೆ ಮಾಡಿದೆ. ಆದರೆ, ಸುಲಿಗೆಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಣಿತ್ತಿದ್ದಾರೆ.
ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಗಗನಮುಖೀ ಆಗುತ್ತಿರುವುದರಿಂದ ಜನ ಸಾಮಾನ್ಯ ಗ್ರಾಹಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಡೋರ್ ಡಿಲೆವರಿ ಹೆಚ್ಚುವರಿ ಶುಲ್ಕ ವಸೂಲಾತಿ ದಂಧೆ ನಡೆಸುತ್ತಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯಾಪ್ತಿಗೆ ಒಳಪಡುವ ಗ್ಯಾಸ್ ಏಜೆನ್ಸಿಗಳು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಏಜೆನ್ಸಿಗಳ ಸಿಬ್ಬಂದಿ ಅಕ್ರಮವಾಗಿ ಸಿಲಿಂಡರ್ ಬಳಕೆದಾರರಿಂದ ಹಣ ಕೀಳುತ್ತಿದ್ದಾರೆ.
ಸಿಲಿಂಡರ್ ಡೋರ್ ಡಿಲೆವರಿಗಾಗಿ ಆಹಾರ ಇಲಾಖೆ ಅಗತ್ಯ ನಿಯಮಗಳನ್ನು ರೂಪಿಸಿ ಪ್ರತಿ ಏಜೆನ್ಸಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ. ಅದರಂತೆ 5 ಕಿ.ಮೀ. ವರೆಗೆ ಗ್ರಾಹಕರ ಮನೆಗಳಿಗೆ ಸಿಲೆಂಡರ್‌ಗಳನ್ನು ಉಚಿತವಾಗಿ ಸರಬರಾಜು ಮಾಡಬೇಕು. ನಂತರ ಒಂದು ಕಿ.ಮೀ. ಗೆ ಶುಲ್ಕ ನಿಗದಿ ಮಾಡಲಾಗಿದೆ. ಆದರೂ, ಈ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ. ಏಜೆನ್ಸಿಯ ವಿತರಕ ಕಾರ್ಮಿಕರು ಬಿಲ್‌ಗಿಂತ 20ರಿಂದ 40 ರೂ. ವರೆಗೆ ಹೆಚ್ಚುವರಿ ಹಣ ಪಡೆದು ವಂಚಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಮನಬಂದಂತೆ ಹಣ ಪಡೆಯಲಾಗುತ್ತಿದೆ. ಗ್ರಾಹಕರಿಗೆ ಇದು ಸಾಮಾನ್ಯವೆಂದು ಒಪ್ಪಿಕೊಂಡಿರುವುದರಿಂದ ಹೆಚ್ಚುವರಿ ಹಣ ತೆರಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ನಿಯಮಗಳನ್ನು ಅರಿತು ಗ್ರಾಹಕರು ಕೆಲವೊಮ್ಮೆ ಕಾರ್ಮಿಕರಿಗೆ ಪ್ರಶ್ನಿಸಿದರೆ ಸಿಲಿಂಡರ್ ಪೂರೈಕೆ ವಿಳಂಬ ಮಾಡಿ ತೊಂದರೆ ಕೊಡುತ್ತಿರುವ ಆರೋಪಗಳು ಇವೆ. ಈ ಅವ್ಯವಹಾರದ ಬಗ್ಗೆ ಏಜನ್ಸಿ ಮಾಲೀಕರಿಗೆ ಅರಿವು ಇದ್ದರೂ ಸಹ ಸಿಲಿಂಡರ್ ವಿತರಕರ ವಿರುದ್ಧ ಕ್ರಮ ಕೈಗೊಳ್ಳದೇ ಪರೋಕ್ಷ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲ ದಂಧೆ ತಡೆಗಟ್ಟಬೇಕಾದ ಅಧಿಕಾರಿ ವರ್ಗ ಈ ಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂಬುದು ಜನರ ಆರೋಪ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಉಜ್ವಲ್ ಯೋಜನೆ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಿ ಹೊಗೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ. ಸರ್ಕಾರದ ಈ ಮಹತ್ವಕಾಂಕ್ಷಿ ಕಾರ್ಯಕ್ರಮದಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್‌ಗಳು ಸೇರಬೇಕು. ಆದರೆ, ಏಜೆನ್ಸಿ ಕಾರ್ಮಿಕರು ‘ಖುಷಿ’ ಹೆಸರಿನಲ್ಲಿ 50 ರಿಂದ 100 ರೂ.ವರೆಗೆ ಹಣ ಪಡೆದು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಫಲಾನುಭವಿಗಳನ್ನು ಗುಂಪುಗಳಾಗಿ ಕರೆದುಕೊಂಡು ಬಂದು ಪ್ರತಿಯೊಬ್ಬರಿಂದ 500 ರೂ. ವರೆಗೆ ಹಣ ದೋಚಿರುವ ಆರೋಪಗಳು ಹೆಚ್ಚಿವೆ. ಗ್ಯಾಸ್ ಸಿಲಿಂಡರ್ ವಿತರಣೆ ನೆಪದಲ್ಲಿ ಗ್ಯಾಸ್ ಏಜೆನ್ಸಿಗಳು ನಡೆಸುತ್ತಿರುವ ಅಕ್ರಮ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಿ ಗ್ರಾಹಕರನ್ನು ಸುಲಿಗೆಯಿಂದ ತಪ್ಪಿಸಬೇಕಿದೆ. ಈ ದಿಸೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕಾಗಿದೆ.