ಬೀದರ: ಭಾವೈಕ್ಯತೆ ಜತೆ ಸೌಹಾರ್ದತೆ ಬೆಸೆಯುವ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸಲ್ಮಾನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ನಗರದ ಬಸ್ ನಿಲ್ದಾಣ ಸಮೀಪದ ಈದ್ಗಾದಲ್ಲಿ ಸಾವಿರಾರೂ ಸಂಖ್ಯೆಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು.
ನಗರದ ಇಸ್ಲಾಮ್ ಧರ್ಮಗುರು ಖುರಾನ್ ಪಠಣ ಮಾಡಿಸುವ ಮೂಲಕ ಹಬ್ಬದ ಸಂದೇಶ ನೀಡಿದರು. ಇಸ್ಲಾಂ ಧರ್ಮದಲ್ಲಿ ಐದು ಕಟ್ಟಾ ವಿಧಿ ವಿಧಾನಗಳನ್ನು ಅಲ್ಲಾಹ ಕಡ್ಡಾಯಗೊಳಿಸಿದ್ದು, ಅವುಗಳನ್ನು ಪಂಚೇಂದ್ರಿಯಗಳೊಂದಿಗೆ ಹೋಲಿಸಲಾಗಿದೆ. ಕಲಮಾ, ನಮಾಜ್, ರೋಜಾ, ಜಕಾತ್, ಹಜ್ ಎಂಬ ಐದು ವಿಧಿ ವಿಧಾನಗಳನ್ನು ಇಸ್ಲಾಂ ಧರ್ಮದ ಪಂಚ ಸ್ತಂಭಗಳು ಎಂದು ಪರಿಗಣಿಸಲಾಗಿದೆ. ದಿನನಿತ್ಯ ಖುರಾನ್ ಪಠಣ ಮಾಡಬೇಕು. ರಂಜಾನ್ ದಿನಗಳಲ್ಲಿ ಉಪಾವಾಸ ಕಡ್ಡಾಯವಾಗಿ ಕೈಗೊಳ್ಳಬೇಕು. ಮುಸ್ಲಿಮನೂ ತನ್ನ ಆದಾಯದದಲ್ಲಿ ಶೇ. ಎರಡೂವರೆ ರೂಪಾಯಿಗಳು ಅಲ್ಲಾಹನ ಹೆಸರಲ್ಲಿ ಬಡವರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ವೃದ್ಧರಿಗೆ ದಾನ ನೀಡಬೇಕು. ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರು ಪ್ರವಾದಿ ಮಹಮ್ಮದ್ ಪೈಗಂಬರರು ಹಾಕಿಕೊಟ್ಟ ಮಾರ್ಗಸೂಚಿ ಪ್ರಕಾರ ಹಜ್ ಯಾತ್ರೆ ಕೈಗೊಳ್ಳಬೇಕು. ಜೀವನದಲ್ಲೊಮ್ಮೆ ಈ ಯಾತ್ರೆ ಕೈಗೊಳ್ಳುವುದು ಕಡ್ಡಾಯ. ಅಲ್ಲದೇ ಸಮಾಜದ ಕಡೆ ವ್ಯಕ್ತಿ ಕೂಡ ಹಜ್ ಯಾತ್ರೆಗೆ ಸಹಾಯ ಮಾಡುವ ಮೂಲಕ ಅಲ್ಲಾಹನ ಕೃಪೆಗೆ ಒಳಗಾಗಬೇಕು. ಭಾರತದಲ್ಲಿ ಇರುವ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುವಂತಾಗಬೇಕು ಎಂದು ಸಂದೇಶ ಸಾರಿದರು.
ಧರ್ಮಗುರು ಮೌಲಾನಾ ಪ್ರಾರ್ಥನಾ ವಿಧಿ ವಿಧಾನಗಳ ಬೋಧಿಸಿದರು. ಈದ್ಗಾಕ್ಕೆ ಭೇಟಿ ನೀಡಿದ ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ, ಕ್ರೀಡಾ ಖಾತೆ ಸಚಿವ ರಹೀಮ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿ ಪರಸ್ಪರ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.