Advertisement

ಕನ್ನಡ ಜಾಗೃತಿಗೆ ಜೂ. ವಿಷ್ಣು ವರ್ಧನ್‌ ಬೈಕ್‌ಯಾತ್ರೆ

04:05 PM Nov 02, 2019 | Naveen |

„ಶಶಿಕಾಂತ ಬಂಬುಳಗೆ
ಬೀದರ:
ವೃತ್ತಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ, ಪ್ರವೃತ್ತಿಯಲ್ಲಿ ಕನ್ನಡಿಗರಲ್ಲಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಜಾಗೃತಿಗೆ ತಮ್ಮ ವಿಶೇಷ ಅಲಂಕೃತ ಬೈಕ್‌ನಲ್ಲಿ ರಾಜ್ಯ ಸುತ್ತುವುದು. ಕನ್ನಡ ಭಾಷೆ ಬೆಳವಣಿಗೆ- ರಕ್ಷಣೆಗೆ ಶ್ರಮಿಸುವುದು. ಕನ್ನಡ ಭಾಷೆ, ಪರಂಪರೆ ಉಳಿವಿಗೆ ಒಬ್ಬೊ ಬ್ಬರು ಒಂದೊಂದು ರೀತಿಯಲ್ಲಿ ಸೇವೆಗೈಯುತ್ತಿದ್ದರೆ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಕಳೆದ ಮೂರ್‍ನಾಲ್ಕು ವರ್ಷದಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭ ಒಂದು ತಿಂಗಳು ಕನ್ನಡ ಪ್ರೀತಿಯನ್ನು ಜನರಲ್ಲಿ ಉಣಬಡಿಸುವ ಕಾರ್ಯ ಮಾಡುತ್ತ ಬಂದಿರುವುದು ವಿಶೇಷ.

Advertisement

ಶುಕ್ರವಾರ ನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಗಮನ ಸೆಳೆದರು. ‘ಜೂನಿಯರ್‌ ವಿಷ್ಣುವರ್ಧನ್‌’ ಎಂದೇ ಬಿರುದು ಪಡೆದಿರುವ ನಾಗಬಸಯ್ಯ ಕನ್ನಡ ಜಾಗೃತಿ ಜತೆಗೆ ಹಾಡು, ಅಭಿನಯ ಮತ್ತು ಮಿಮಿಕ್ರಿ ಮಾಡುತ್ತಾರೆ. ನಟ ದಿ| ಡಾ| ವಿಷ್ಣುವರ್ಧನ್‌ ಅವರ ಕಟ್ಟಾ ಅಭಿಮಾನಿಯಾದ ಇವರು ಅವರನ್ನು ತಮ್ಮ ಬದುಕಿನ ದಿಕ್ಕು ಬದಲಿಸಿದ ಆರಾಧ್ಯ ದೈವ ಎಂದೇ ನಂಬಿದ್ದಾರೆ. ವಿಷ್ಣು ಅವರಂತೆ ಕನ್ನಡ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ವಿಷ್ಣು ಅವರಂತೆ ಬಟ್ಟೆ ಹಾಕುವ, ದೊಡ್ಡ ಮೀಸೆ ಹೊಂದಿರುವ ಮಳಲಿಮಠ ಕನ್ನಡ ಭಾಷೆ ಉಳಿಸಿ-ಬೆಳೆಸುವ ಉದ್ದೇಶ ಹೊತ್ತು ರಥಯಾತ್ರೆ ನಡೆಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಹೊರಟಿರುವ ಅವರ ಯಾತ್ರೆ ಯಾದಗಿರಿ, ಕಲ್ಬುರ್ಗಿ ಮಾರ್ಗವಾಗಿ ರಾಜ್ಯೋತ್ಸವದಂದು ಗಡಿ ನಗರ ಬೀದರಗೆ ತಲುಪಿದೆ.

ಹೋದಲ್ಲೆಲ್ಲಾ ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಹೊಂಡಾ ಎಕ್ಟಿವಾ ಕಂಪನಿ ಬೈಕ್‌ನ್ನೇ “ಕನ್ನಡದ ರಥ’ವಾಗಿ ಶೃಂಗರಿಸಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಜ್ಞಾನಪೀಠ
ಪುರಸ್ಕೃತರ ಭಾವಚಿತ್ರಗಳು, ವಿಭಿನ್ನ ಪಾತ್ರಗಳಲ್ಲಿ ನಟಿಸಿದ ಡಾ| ವಿಷ್ಣು ಅವರ ಚಿತ್ರಗಳು ರಾರಾಜಿಸುತ್ತಿದ್ದರೆ, ಮುಂದೆ ತಾಯಿ ಭುವನೇಶ್ವರಿ ಮತ್ತು ಕನ್ನಡ ನುಡಿ ಮುತ್ತುಗಳು ಆಕರ್ಷಿಸುತ್ತಿವೆ. ಕರ್ನಾಟಕದ ಬಾವುಟ, ಹೂವಿನ ಅಲಂಕಾರ ಅದರ ಅಂದ ಹೆಚ್ಚಿಸಿದೆ. ಬೈಕ್‌ಗೆ ಧ್ವನಿವರ್ಧಕ ಅಳವಡಿಸಿದ್ದು, ಕೇವಲ ಕನ್ನಡಪರ ಸಿನಿಮಾ ಹಾಡುಗಳು ಮತ್ತು ಮಾತೃಭಾಷೆ ಬೆಳೆಸುವ ನಿಟ್ಟಿನಲ್ಲಿ ಚಿಂತನಾ ಭಾಷಣಗಳನ್ನು ಮಾತ್ರ ಹಾಕುತ್ತಾರೆ.

ಕನ್ನಡಿಗನ ಹೋರಾಟಕ್ಕೆ ಉದ್ಯೋಗ ಮಾಡುವ ಬೆಂಗಳೂರಿನ ಕಲರ್‌ ಕ್ರಾಫ್ಟ್‌ ಖಾಸಗಿ ಕಂಪನಿ ಸಹಕಾರ ನೀಡುತ್ತಿದೆ. ಕನ್ನಡ ರಥ ಎಳೆಯಲು ಸಮಯಾವಕಾಶ ಮಾಡಿಕೊಡುತ್ತಿದೆ. ಮಳಲಿಮಠ ಅವರು ಇನ್ನು ರಜೆ ದಿನಗಳನ್ನು ಸಹ ಕನ್ನಡ ಸೇವೆಗಾಗಿಯೇ ಬಳಸಿಕೊಳ್ಳುತ್ತಾರೆ. ಯಾತ್ರೆ ವೇಳೆ ಕನ್ನಡಪರ ಸಂಘಟನೆಗಳು, ಪೊಲೀಸ್‌ ಸಿಬ್ಬಂದಿ ಅಗತ್ಯ ವ್ಯವಸ್ಥೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next