ಬೀದರ: ಜನತಾ ಸ್ಪಂದನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ಥಾಪಿಸಿರುವ ದೂರುಗಳ ಪೆಟ್ಟಿಗೆಯಲ್ಲಿ ದಾಖಲಾಗುವ ಸಾರ್ವಜನಿಕ ದೂರುಗಳಿಗೆ ಶೀಘ್ರ ಸ್ಪಂದನೆ ಸಿಗುತ್ತಿದೆ.
ಬೀದರನ 30ನೇ ವಾರ್ಡ್‌ನಲ್ಲಿ ರಸ್ತೆ ದುರಸ್ತಿಗಾಗಿ ತಕ್ಷಣ ಕ್ರಮ ಜರುಗಿಸಬೇಕು ಎಂದು ಚೆನ್ನಬಸವ ನಗರದ ನಿವಾಸಿಗಳು ಸೋಮವಾರ ರಸ್ತೆಯ ಭಾವಚಿತ್ರಗಳ ಸಮೇತ ದೂರುಪೆಟ್ಟಿಗೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸಚಿವ ಪ್ರಭು ಚವ್ಹಾಣ ಅವರು ಬೀದರನ ಕುಂಬಾರವಾಡ ರಸ್ತೆಯಲ್ಲಿನ ಚನ್ನಬಸವ ನಗರಕ್ಕೆ ಮಂಗಳವಾರ ತಾವೇ ಖುದ್ದು ಭೇಟಿ ನೀಡಿದರು. ದೂರು ದಾಖಲಾದ 24 ಗಂಟೆಯೊಳಗಡೆ ಅಲ್ಲಿನ ನಿವಾಸಿಗಳಿಗೆ ಪರಿಹಾರ ಕಲ್ಪಿಸಿದ್ದಾರೆ.
ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು: ಬೆಳಗ್ಗೆ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ನೇರವಾಗಿ ಬೀದರ ಚನ್ನಬಸವ ನಗರಕ್ಕೆ ಆಗಮಿಸಿದ ಸಚಿವರು, ದೂರು ನೀಡಿದ ವ್ಯಕ್ತಿಗಳನ್ನು ಸಂಪರ್ಕಿಸಿದರು. ಅಲ್ಲಿನ ರಸ್ತೆಯ ದುರಾವಸ್ಥೆಯನ್ನು ಖುದ್ದು ವೀಕ್ಷಿಸಿದರು. ರಸ್ತೆ ಬದಿಯಲ್ಲಿ ನೀರು ನಿಂತಿರುವುದನ್ನು ಗಮನಿಸಿ, ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡರು.
ನಗರಸಭೆ ಪೌರಾಯುಕ್ತರು ಮತ್ತು ಅಭಿಯಂತರರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ‘ನಿಮಗೆ ಎಷ್ಟು ಬಾರಿ ಹೇಳಬೇಕು. ನಗರದಲ್ಲಿ ಈ ರೀತಿ ಅವ್ಯವಸ್ಥೆಯಾದರೆ ಜನರ ಗತಿಯೇನು? ನೀವು ಕಾಲಕಾಲಕ್ಕೆ ನಗರದ ಆಯಾ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲಿಸುತ್ತಿದ್ದರೆ ಎಲ್ಲಿ ಏನಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಕಚೇರಿಯಲ್ಲಿಯೇ ಕುಳಿತರೆ ಕೆಲಸ ಆಗುತ್ತದೆಯೇ? ಎಂದು ಪ್ರಶ್ನಿಸಿ ಅವರನ್ನು ತರಾಟೆ ತೆಗೆದುಕೊಂಡರು.
ಸ್ಥಳಕ್ಕೆ ಜೆಸಿಬಿ ತರಿಸಿದರು: ತಾವು ಈ ಕೂಡಲೇ ಈ ಸ್ಥಳಕ್ಕೆ ಜೆಸಿಬಿ ತರಿಸಿಕೊಳ್ಳಿರಿ. ಈ ಕೂಡಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಸಚಿವರು ನಗರಸಭೆ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ಜೆಸಿಬಿ ಬರುವವರೆಗೆ ಸ್ಥಳದಲ್ಲೇ ಇರುವುದಾಗಿ ಸಚಿವರು ತಿಳಿಸಿ ಅಲ್ಲಿಯೇ ಕುಳಿತರು. ಬಳಿಕ ಕೆಲವೇ ನಿಮಿಷಗಳಲ್ಲಿ ಚನ್ನಬಸವ ನಗರಕ್ಕೆ ಎರಡು ಜೆಸಿಬಿಗಳು ಆಗಮಿಸಿದವು. ಸಚಿವರ ಎದುರಿಗೆ ರಸ್ತೆ ದುರಸ್ತಿ ಮತ್ತು ಚರಂಡಿ ದುರಸ್ತಿ ಕಾರ್ಯ ಆರಂಭಗೊಂಡಿತು.
ಈ ರಸ್ತೆಯಲ್ಲಿ ಪ್ರತಿ ದಿನ ಸಂಚರಿಸಲು ನವೀನ್ ಪಬ್ಲಿಕ್ ಶಾಲೆ ಮತ್ತು ರವೀಂದ್ರ ಶಾಲೆಯ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಜನರು ಇಲ್ಲಿ ಓಡಾಡಲು ದಿನವೀಡಿ ಆಗುತ್ತಿರಲಿಲ್ಲ. ತಾವು ನಮ್ಮ ದೂರಿಗೆ ಸ್ಪಂದಿಸಿ, ಸ್ಥಳಕ್ಕೆ ಬಂದು ರಸ್ತೆ ಸರಿಪಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಅಲ್ಲಿನ ನಿವಾಸಿಗಳ ಸಚಿವರಿಗೆ ತಿಳಿಸಿದರು. ಈ ವೇಳೆ ಪೌರಾಯುಕ್ತ ಬಿ.ಬಸಪ್ಪ, ಅಭಿಯಂತರರಾದ ರಾಜಶೇಖರ ಮಠಪತಿ ಇದ್ದರು.