Advertisement

ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ

11:47 AM Jan 09, 2020 | Naveen |

ಬೀದರ: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಗಡಿ ಜಿಲ್ಲೆ ಬೀದರನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬೀದರ ನಗರ ಸೇರಿದಂತೆ ಜಿಲ್ಲೆಯಲ್ಲಿ ವಾಹನ ಸಂಚಾರ ಹಾಗೂ ಜನಜೀವನ ಎಂದಿನಂತೆ ಇತ್ತು. ವ್ಯಾಪಾರ ವಹಿವಾಟು ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜಿಲ್ಲಾ ರೈತರ ಮತ್ತು ಕಾರ್ಮಿಕರ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಗಳ ಭೂತ ಕನ್ನಡಿಯಲ್ಲಿ ಅಭಿವೃದ್ಧಿ ತೋರಿಸುತ್ತ ಸ್ವರ್ಗವನ್ನೇ ದೇಶದ ಜನರಿಗೆ ಕೊಡುವುದಾಗಿ ಬಂಡವಾಳದಾರ ಸರ್ಕಾರಗಳು ಅಶ್ವಾಸನೆ ಕೊಟ್ಟಿರುತ್ತಿವೆ. ಎಲ್ಲವೂ ಖಾಸಗಿಕರಣಗೊಳಿಸುತ್ತ ಸರ್ಕಾರದ ಆಸ್ತಿ ಮಾರಾಟ ಮಾಡುತ್ತ ವಿದೇಶಿ ನೇರ ಬಂಡವಾಳ ಮತ್ತು ಶೇರು ಹಿಂದಕ್ಕೆ ತೆಗೆದುಕೊಳ್ಳುತ್ತ ಸರ್ಕಾರಿ ವಲಯದ ಆಸ್ತಿಯನ್ನೇ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ಬೆಂಬಲಿತ ಪ್ರಧಾನಿ ಮೋದಿ ಸರ್ಕಾರ ದೇಶದ ಜನರಿಗೆ ನೀಡಿದ್ದ ಎಲ್ಲ ಅಶ್ವಾಸನೆಗಳು ಸುಳ್ಳಾಗಿವೆ. ಕಪ್ಪು ಹಣ ತರಲಿಲ್ಲ, ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪಾವತಿಸಲಿಲ್ಲ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಆದರೆ, ನೋಟ್‌ ಬಂದಿ ಮತ್ತು ಜಿಎಸ್‌ಟಿ ಹೆಸರಿನಲ್ಲಿ ಸುಳ್ಳು ಪ್ರಚಾರ ಮಾಡುತ್ತ ಜಿಡಿಪಿ ಹೆಚ್ಚಾಗಿದೆ ಎಂದು ಹೇಳುತ್ತಿದೆ ಎಂದು ಆರೋಪಿಸಿದರು.

Advertisement

ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ. ಕೃಷಿಕರ ಭೂಮಿಯನ್ನು ಕಾರ್ಪೋರೇಟ್‌ ವಲಯಕ್ಕೆ ಕೊಡುತ್ತಿದೆ. ಇದರಿಂದಾಗಿ ರೈತರು ನಿರ್ಗತಿಕ ರಾಗುತ್ತಿದ್ದಾರೆ. ಡಾ| ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸದೇ ರೈತರಿಗೆ ಕೊಟ್ಟು ಅಶ್ವಾಸನೆಯಿಂದ ವಿಮುಖವಾಗಿದೆ. ಈವರೆಗೆ 3ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಕೃಷಿ ವಿರೋಧ ಆರ್ಥಿಕ ನೀತಿ ಕಾರಣವಾಗಿದೆ ಎಂದು ಕಿಡಿಕಾರಿದರು.

ಮುಷ್ಕರಕ್ಕೆ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಡಿಎಸ್‌
ಎಸ್‌, ಎಲ್‌ಐಸಿ ಮತ್ತು ವಿಮಾ ನೌಕರರ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಪ್ರಮುಖರಾದ ಬಾಬುರಾವ ಹೊನ್ನಾ, ಆರ್‌ಪಿ ರಾಜಾ, ರಾಜಕುಮಾರ ಮೂಲಭಾರತಿ, ಲಕ್ಷ್ಮೀ ದಂಡೆ, ಶಕುಂತಲಾ, ಚಂದ್ರಬಾನ್‌, ಪ್ರಭು ಹೊಚಕನಳ್ಳಿ, ಶ್ರೀಕಾಂತಸ್ವಾಮಿ, ಮನಸೂರ್‌ ಖಾದ್ರಿ, ಮಾಣಿಕ ಖಾನಾಪುರಕರ್‌, ಮುನಿರುದ್ದೀನ್‌, ಗುರುಪಾದಯ್ಯಸ್ವಾಮಿ, ನಜೀರ್‌ ಅಹ್ಮದ್‌, ಬಸವರಾಜ ಪಾಟೀಲ, ರಾಜ ಮಹ್ಮದ್‌, ರಾಮಣ್ಣ ಅಲ್ಮಾಸಪುರ, ಶಫಾಯತ್‌ ಅಲಿ, ಖಮರ್‌ ಪಟೇಲ್‌, ಅರುಣ ಪಟೇಲ್‌, ರವಿ ವಾಘಮಾರೆ, ಖದೀರಮಿಯ್ನಾ, ಅಹ್ಮದ್‌ ಜಂಬಗಿ, ಮುಬ್ಬಸೀರ್‌ ಸಿಂಧೆ, ಪ್ರಭು ಟಿ., ಅಸಾವೊದ್ದೀನ್‌, ಅನ್ಸಾರ್‌ ಅಲಿ, ಸರಫರಾಜ್‌ ಅಲಿ, ಮುಬ್ಬಸಿರ ಅಲಿ ಭಾಗವಹಿಸಿದ್ದರು.

ಬೇಡಿಕೆಗಳೇನು?: ಸಿಎಎ, ಎನ್‌ಆರ್‌ಸಿ ಕಾಯ್ದೆ ಹಿಂಪಡೆಯಬೇಕು. ವಿವಿಗಳಲ್ಲಿ ಸಂಘ ಪರಿವಾರದ ಗುಂಡಾಗಿರಿ ತಡೆಯಬೇಕು. ಬೆಳ್ಳುಳಿ, ಉಳ್ಳಾಗಡ್ಡಿ ಸರ್ಕಾರವೇ ಸಹಕಾರ ಸಂಘಗಳ ಮೂಲಕ ವಿತರಿಸಬೇಕು. ಸಾರ್ವತ್ರಿಕ ವಲಯದ ಕಂಪನಿಗಳಾದ ಎಲ್‌ಐಸಿ, ಬ್ಯಾಂಕ್‌, ವಿದ್ಯುತ್‌, ಆರೋಗ್ಯ, ರೇಲ್ವೆ ಖಾಸಗೀಕರಣಗೊಳಿಸಬಾರದು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಹಾಗೂ ರಕ್ಷಣಾ ವಯಲದಲ್ಲಿ ವಿದೇಶಿ ನೇರ ಬಂಡವಾಳದ ಆದೇಶ ಹಿಂತೆಗೆದುಕೊಳ್ಳಬೇಕು.

ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕರು, ಬಿಸಿಊಟ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 21000 ರೂ. ವೇತನ, 10,000 ರೂ. ನಿವೃತ್ತಿ ವೇತನ ನಿಗದಿಪಡಿಸಬೇಕು. ಇದೇ ರೀತಿ ಅಸಂಘಟಿತ ಕಾರ್ಮಿಕರಿಗೂ ನಿಗದಿಪಡಿಸಬೇಕು. ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ ನಿವೃತ್ತಿ ವೇತನ 10,000 ರೂ. ಮತ್ತು ಮನೆ ಕಟ್ಟಲು 5 ಲಕ್ಷ ರೂ., ಅಪಘಾತ ಪರಿಹಾರ 5 ಲಕ್ಷ ರೂ. ನಿಗದಿಪಡಿಸಬೇಕು. ಗುತ್ತಿಗೆ ಪದ್ದತಿ ರದ್ದುಪಡಿಸಿ ಖಾಲಿ ಹುದ್ದೆ ತುಂಬಬೇಕು. ಸಾರ್ವತ್ರಿಕ ಆಸ್ಪತೆ ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕು.

ಭೂಸ್ವಾಧಿನ ಕಾಯ್ದೆ-2013ನ್ನು ತಿದ್ದುಪಡಿ ಮಾಡದಂತೆ ಜಾರಿ ಮಾಡಬೇಕು. ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು. ತೊಗರಿ ಬೆಳೆ ಕ್ವಿಂ.ಗೆ 7500 ರೂ.ನಂತೆ ಸರ್ಕಾರ ಖರೀದಿಸಬೇಕು. ಡಾ| ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿ ಮಾಡಬೇಕು. ರಾಷ್ಟ್ರೀಕೃತ ಮತ್ತು ಸ್ವ-ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ರೈತರು ಮತ್ತು ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ರೂ. ಪಿಂಚಣಿ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next