Advertisement

ದುಬಾರಿ ದಂಡ ಮಸೂದೆ ವಿರೋಧಿಸಿ ಪ್ರತಿಭಟನೆ

03:06 PM Aug 28, 2019 | Team Udayavani |

ಬೀದರ: ಕೇಂದ್ರ ಸರಕಾರದ ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ ದುಬಾರಿ ದಂಡದ ಮಸೂದೆ ಜಾರಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಹಾಗೂ ಆಟೋ ಚಾಲಕರ ಕಲ್ಯಾಣ ಯೋಜನೆ ರೂಪಿಸುವಂತೆ ಆಗ್ರಹಿಸಿ ಫೆಡರೇಶನ್‌ ಆಫ್‌ ಕರ್ನಾಟಕ ಆಟೊರಿಕ್ಷಾ ಡ್ರೈವರ್ ಯೂನಿಯನ್‌ (ಸಿಐಟಿಯು) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಹೆಸರಿನಲ್ಲಿ ಮೂರು ಬಾರಿ ಬದಲಾವಣೆ ಮಾಡಿ ತಿದ್ದುಪಡಿ ಮಾಡಿದ ಕಾಯ್ದೆ ಅವೈಜ್ಞಾನಿಕವಾಗಿದೆ. ಅಲ್ಲದೆ, ದುಬಾರಿ ದಂಡ ವಿಧಿಸುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. 15 ವರ್ಷಗಳ ಹಳೆಯ ಆಟೊಗಳನ್ನು ರಸ್ತೆಗೆ ಇಳಿಯದಂತೆ ಕಾನೂನು ತಂದಿದ್ದು, ಸರ್ಕಾರ ಕನಿಷ್ಠ 50 ಸಾವಿರ ಪ್ರೋತ್ಸಾಹ ಧನ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಬೇಕು. ಆಟೋ ಚಾಲನೆ ಮಾಡುವ ವ್ಯಕ್ತಿಗಳು ಅವಿದ್ಯಾವಂತರ ಸಂಖ್ಯೆ ಹೆಚ್ಚಿದ್ದು, ಅವರು ಚಾಲನಾ ಪ್ರಮಾಣ ಪತ್ರ ಪಡೆಯಬೇಕಾದರೆ ಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಚಾಲನಾ ಪ್ರಮಾಣ ಪತ್ರಕ್ಕೆ ವಿದ್ರ್ಯಾಹತೆ ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಪ್ರತಿವರ್ಷ ವಿಮಾ ಕಂಪನಿಗಳು ವಾಹನದ ವಿಮೆಯಲ್ಲಿ ಏರಿಕೆ ಮಾಡುತ್ತಿವೆ. ಇದು ಆಟೋ ಚಾಲಕರಿಗೆ ಹೊರೆಯಾಗುತ್ತಿದೆ. ಅವಘಡಕ್ಕೆ ಒಳಗಾದ ವಾಹನಗಳಿಗೆ ಕಂಪನಿಗಳು ಹತ್ತಾರು ನಿಯಮಗಳನ್ನು ಹೇಳಿ ವಿಮಾ ಹಣ ಪಾವತಿ ಮಾಡುತ್ತಿಲ್ಲ. ಕೂಡಲೇ ಸರ್ಕಾರ ವಾಹನಗಳ ವಿಮಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಅಲ್ಲದೆ ವಿಮಾ ಹಣ ಕಡಿಮೆಗೊಳಿಸಬೇಕು. ಆಟೋ ಚಾಲಕರಿಗೆ ಇಎಸ್‌ಐ ಸೌಲಭ್ಯಗಳು ದೊರೆಯುವಂತೆ ಸರ್ಕಾರ ಮಾಡಬೇಕು. ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿ ಹಾಗೂ ಪಿಂಚಣಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಆರ್‌.ಪಿ. ರಾಜು, ಉಪಾಧ್ಯಕ್ಷ ಸಿದ್ದಪ್ಪಾ ನಾಗೂರಾ, ಕಾರ್ಯದರ್ಶಿ ಶಿವಕುಮಾರ ನಾಗೋರಾ, ಕಾರ್ಯದರ್ಶಿ ಅಬ್ದುಲ್ ಮನ್ನಾನ್‌, ಖಜಾಂಚಿ ಮಕ್ಸೂದ ಅಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next