ಬೀದರ: ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸ ಮಾಡಿ ಬೆವರು ಆರುವ ಮುನ್ನವೇ ಕೂಲಿ ದೊರೆತಲ್ಲಿ ಅವರು ತುಂಬಾ ಖುಷಿ ಪಡುತ್ತಾರೆ. ಹಾಗಾಗಿ ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಡಿ ಕೆಲಸ ಮಾಡಿದ ಕಾರ್ಮಿಕರಿಗೆ ಪಾವತಿಸಬೇಕಾದ ಕೂಲಿಯನ್ನು ಕೂಡಲೆ ಪಾವತಿ ಮಾಡಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಕಾರ್ಮಿಕರಿಗೆ ಬೇಗ ಹಣ ಸಿಗುವಂತಾಗಲು ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಚುರುಕಾಗಬೇಕು. ಅಭಿಯಾನದ ಮಾದರಿಯಲ್ಲಿ ಈ ಕೆಲಸ ಪೂರ್ಣಗೊಳಿಸಬೇಕು. ಈ ಕಾರ್ಯಕ್ಕೆ ಲೀಡ್ ಬ್ಯಾಂಕ್ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಬೆಳೆ ವಿಮೆ ನೋಂದಣಿಗೆ ಶ್ಲಾಘನೆ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಅವರು ಕೃಷಿ ಇಲಾಖೆಯ ಪ್ರಗತಿ ಮಾಹಿತಿ ನೀಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 2.62 ಲಕ್ಷ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿದ್ದಾರೆ. 2018-19ನೇ ಸಾಲಿನಲ್ಲಿ ಜಿಲ್ಲೆಗೆ 125.30 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಸೌಲಭ್ಯ ಸಿಕ್ಕಿತ್ತು ಎಂದು ತಿಳಿಸಿದರು. ಬೆಳೆ ವಿಮೆ ನೋಂದಣಿಗೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಾರ್ಯದರ್ಶಿಗಳು, ಬೆಳೆ ವಿಮೆ ಮಾಡಿಸುವುದು ರೈತರಿಗೆ ರೂಢಿಯಾಗಬೇಕು ಎಂದು ಹೇಳಿದರು.
ಮೇವಿನ ಕೊರತೆಯಾಗದಿರಲಿ: ಜಿಲ್ಲೆಯಲ್ಲಿ ಒಟ್ಟು 15 ಮೇವು ಕೇಂದ್ರಗಳನ್ನು ತೆರೆಯಲಾಗಿದೆ. ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಐದು ತಾಲೂಕುಗಳಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಉಸ್ತುವಾರಿ ಕಾರ್ಯದರ್ಶಿ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲು ಮುಂಚಿತವಾಗಿ ಅಗತ್ಯ ಯೋಜನೆ ರೂಪಿಸಿಕೊಂಡಿರಬೇಕು ಎಂದು ಸೂಚಿಸಿದರು.
ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಕಟ್ಟಡ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮ ಪಂಚಾಯಿತಿಗಳಿಂದ ಜೆಸ್ಕಾಂಗೆ ಪಾವತಿಸಬೇಕಾಗಿರುವ ವಿದ್ಯುತ್ ಬಿಲ್ಗಳನ್ನು ಬೇಗ ಪಾವತಿಸಬೇಕು. ವಿದ್ಯುತ್ ಪೋಲಾಗುವುದನ್ನು ತಡೆಯಲು ಬೀದಿ ದೀಪಗಳಿಗೂ ಮೀಟರ್ ಅಳವಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹೊಸ ತಾಲೂಕುಗಳಿಗೆ ಸೌಕರ್ಯ ನೀಡಿ: ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಹೊಸ ಕಚೇರಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವಿವಿಧ ಇಲಾಖೆಗಳ ಕಚೇರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.
ಇದೇ ವೇಳೆ ಆರೋಗ್ಯ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಶಂಕರ ವಣಕ್ಯಾಳ, ಜ್ಞಾನೇಂದ್ರಕುಮಾರ ಗಂಗವಾರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.