Advertisement

ಅಂಗನವಾಡಿ ಮಕ್ಕಳಿಗೆ ರವಾ ನೀಡಿ

11:05 AM Aug 14, 2019 | Naveen |

ಬೀದರ: ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನು ಕೆಲಸ ಮಾಡುತ್ತಿದೆ? ನಿಯಮದ ಪ್ರಕಾರ ರವಾ ನೀಡುವ ಬದಲಿಗೆ ಮಕ್ಕಳಿಗೆ ಹಿಟ್ಟು ನೀಡಲಾಗುತ್ತಿದೆ ಯಾಕೆ? ಆಹಾರ ತಯಾರಿಸುವ ಘಟಕಗಳ ಮೇಲೆ ನಿಗಾ ಯಾಕೆ ಇಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Advertisement

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಆಹಾರ ತಯಾರಿಸುವ ಎಂಎಸ್‌ಪಿಸಿ ಘಟಕಗಳಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಕ್ಕಿಗಳು ಹಿಕ್ಕೆ ಹಾಕುವ ಸ್ಥಳ ಹಾಗೂ ನೆಲದಮೇಲೆ ಆಹಾರ ಧಾನ್ಯ ಹಾಕಿ ಹೇಗೆ ಗುಣಮಟ್ಟದ ಆಹಾರ ತಯಾರಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಮಕ್ಕಳಿಗೆ ರವಾ ನೀಡಿದರೆ ಮನೆಯಲ್ಲಿ ಉಪ್ಪಿಟ್ಟು ಮಾಡಿಕೊಂಡು ತಿನ್ನುತ್ತಾರೆ. ಆದರೆ, ಹಿಟ್ಟು ನೀಡಿದರೆ ಹೇಗೆ? ಅದನ್ನು ಏನು ಮಾಡಲು ಬರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ ಈ ಕುರಿತು ಪರಿಶೀಲಿಸುವುದಾಗಿ ಹೇಳಿದರು. ರವಾ ಬದಲಿಗೆ ಹಿಟ್ಟು ನೀಡುತ್ತಿದರೆ ನೋಟಿಸ್‌ ನೀಡಿ ರವಾ ನೀಡಲು ಸೂಚಿಸುವುದಾಗಿ ಸಭೆಗೆ ತಿಳಿಸಿದರು. ಇದಕ್ಕೆ ಮತ್ತೆ ಸಿಟ್ಟಾದ ಸಿಇಒ ಹಿಟ್ಟಿನ ಬದಲಿಗೆ ರವಾ ನೀಡಲು ತಿಳಿಸುತ್ತಿರಾ. ಗುತ್ತಿಗೆ ಪಡೆದವರಿಗೆ ಹಣ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದರು. ಉಪನಿರ್ದೇಶಕರು ಎಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಅಧಿನದಲ್ಲಿನ ಸಿಡಿಪಿಒಗಳಿಂದ ಸೂಕ್ತ ಕೆಲಸ ತೆಗೆದುಕೊಳ್ಳಬೇಕು. ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಆಗಬೇಕು. ಈ ಕಾರ್ಯದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಅಧಿಕಾರಿಗಳಿಗೆ ನೋಟಿಸ್‌: ಕಳೆದ ಸಭೆಗೆ ಹಾಜರಾಗದ 38 ಅಧಿಕಾರಿಗಳಿಗೆ ಇಲಾಖೆಯಿಂದ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಇದೀಗ ಮತ್ತೆ ಸಭೆಗೆ ಅಧಿಕಾರಿಗಳು ಗೈರಾಗಿದ್ದು, ಅಂತಹ ಅಧಿಕಾರಿಗಳಿಗೆ ಮತ್ತೆ ಶೋಕಾಸ್‌ ನೋಟಿಸ್‌ ನೀಡಬೇಕು. ಮೂರು ಬಾರಿ ಯಾರಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಕೊಂಡು ಅಂತಹ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ಅವರ ನಡವಳಿಕೆ ಕುರಿತು ಬರೆಯಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಮಾಹಿತಿ ಇಲ್ಲದೆ ಬಂದರು: ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಬಹುತೇಕ ಅಧಿಕಾರಿಗಳು ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ಬಂದಿದ್ದರಿಂದ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಸಿಇಒ ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ ಛೀಮಾರಿ ಹಾಕಿದ ಘಟನೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಅಧ್ಯಕ್ಷರು ಹಾಗೂ ಸಿಇಒ ಕೇಳಿದ ಪ್ರಶ್ನೆಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಲ್ಲಿ ವಿಫಲರಾಗಿದ್ದು, ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬರುತ್ತೀರಿ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ಪತ್ರ ಬರೆದು ಮನೆಗೆ ಹೋಗಿ ಎಂದು ಜಿಪಂ ಅಧ್ಯಕ್ಷೆ ಕಿಡಿ ಕಾರಿದರು.

Advertisement

35 ಕೋಟಿ ವಿಮೆ ಬಿಡುಗಡೆ: ಕಳೆದ ವರ್ಷ ಬರದಿಂದ ಬೆಳೆ ಹಾನಿ ಸಂಭವಿಸಿದ ಜಿಲ್ಲೆಯ ರೈತರಿಗೆ ಒಟ್ಟಾರೆ 125 ಕೋಟಿ ಬೆಳೆವಿಮೆ ಮಂಜೂರಾಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ 45 ಸಾವಿರ ರೈತರಿಗೆ 37 ಕೋಟಿ ವಿಮಾ ಹಣ ಬಿಡುಗಡೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ 72 ಕೋಟಿ ಹಾಗೂ ಮೂರನೇ ಹಂತದಲ್ಲಿ ಇನ್ನುಳಿದ ವಿಮಾ ಹಣ ಬಿಡುಗಡೆಯಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ವಿದ್ಯಾನಂದ ಮಾಹಿತಿ ನೀಡಿದರು. ಈಗಾಗಲೇ ಜಿಲ್ಲೆಯಲ್ಲಿ ಶೇ.92ರಷ್ಟು ಬಿತ್ತನೆಯಾಗಿದೆ. ಜೂನ್‌, ಜುಲೈ ತಿಂಗಳಲ್ಲಿ ಮಳೆ ಕೊರತೆ ಇತ್ತು. ಆದರೆ, ಆಗಸ್ಟ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆ ಬಂದರೆ ಮುಂದಿನ ಹಿಂಗಾರು ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ನರೆಗಾದಲ್ಲಿ 30ನೇ ಸ್ಥಾನ: ನರೆಗಾ ಯೋಜನೆಯಡಿ ವಿವಿಧ ಇಲಾಖೆಗಳು ಮಾಡಿದ ಕಾಮಗಾರಿಗೆ ಸೂಕ್ತ ಸಮಯಕ್ಕೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ನರೆಗಾ ಯೋಜನೆಯಲ್ಲಿ ಬೀದರ ಜಿಲ್ಲೆ ಹಿಂದೆ ಉಳಿದುಕೊಂಡಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಪಿಆರ್‌ಇ ಸೇರಿದಂತೆ ಇತರೆ ಇಲಾಖೆಗಳು ಕೂಡಲೇ ಹಣ ಪಾವತಿಗೆ ಮಹತ್ವ ನೀಡಬೇಕು ಎಂದು ಜಿಪಂ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ ತಮ್ಮ ಅಧಿಕಾರದ ಬಗ್ಗೆ ಮಾಹಿತಿ ಬೇಕೆಂದು ಪಟ್ಟು ಹಿಡಿದರು. ಜಿಪಂ ಉಪಾಧ್ಯಕ್ಷರಿಗೆ ಯಾವ ಅಧಿಕಾರಗಳು ಇವೆ ಎಂಬುದನ್ನು ಸಿಇಒ ಸ್ಪಷ್ಟಪಡಿಸಬೇಕು ಎಂದು ಒತ್ತಾಯ ಮಾಡಿದ ಬುಳ್ಳಾ ಅವರಿಗೆ ಸಿಇಒ ಉಪಾಧ್ಯಕ್ಷರಿಗೆ ಇರುವ ಅಧಿಕಾರ ಕುರಿತು ವಿವರಣೆ ನೀಡಿದರು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಧಿಕಾರ ಬಳಸಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next