ಬೀದರ: ಮಳೆಗಾಲ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಬೀದರ್ ನಗರಸಭೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಇದೀಗ ಮುಂದಾಗಿದೆ.
ಕೆಲ ತಿಂಗಳುಗಳಿಂದ ನಗರದ ವಿವಿಧ ಬಡಾವಣೆಗಳ ಚರಂಡಿಗಳು ತುಂಬಿಕೊಂಡು ಗಬ್ಬು ನಾರುತ್ತಿದ್ದರೂ ಅಧಿಕಾರಿಗಳು ಯಾರೂ ಸ್ಪಂದಿಸುತ್ತಿಲ್ಲ, ನಗರದ ಸ್ವಚ್ಛತೆಗೆ ಯಾರು ಮುಂದಾಗುತ್ತಿಲ್ಲ ಎಂಬ ಗೋಳುಗಳು ಕೇಳಿಬಂದಿದ್ದವು. ಆದರೆ ಇದೀಗ ನಗರಸಭೆಗೆ ಪ್ರಭಾರ ವಹಿಸಿಕೊಂಡ ಶರಣಬಸಪ್ಪ ಕೊಟ್ಟಪಗೋಳ ನಗರ ಸ್ವಚ್ಛತೆಗೆ ಮುಂದಾಗಿದ್ದಾರೆ. ಅಲ್ಲದೆ, ಎರಡು ವರ್ಷಗಳ ಹಿಂದೆ ಎದುರಾದ ಸಮಸ್ಯೆಗಳ ಮಾಹಿತಿ ಕಲೆಹಾಕಿರುವ ಅವರು, ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.
ಚರಂಡಿಗಳ ಹೂಳು ತೆಗೆಯುವುದು ಮಳೆಗಾಲಕ್ಕೆ ಮುನ್ನ ಮುಖ್ಯವಾಗಿ ಆಗಬೇಕಿರುವ ಕೆಲಸ ಎಂದು ತಿಳಿದುಕೊಂಡಿರುವ ನಗರ ಸಭೆ ಅಧಿಕಾರಿಗಳು ಇತ್ತೀಚೆಗೆ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ. ಚರಂಡಿ ಹೂಳು ತೆಗೆಯುವ ಕಾರ್ಯಕ್ಕೆ ಜನರು ಉತ್ತಮ ಅಭಿಪ್ರಾಯಗಳು ವ್ಯಕ್ತಪಡಿಸಿದ್ದು, ಚರಂಡಿಯಿಂದ ತೆಗೆಯುವ ಕೊಳಚೆಯನ್ನು ಕೂಡಲೇ ಸಾಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿನ ಶೇ.80ಕ್ಕೂ ಅಧಿಕ ಚರಂಡಿಗಳು ಕಸ, ತ್ಯಾಜ್ಯದಿಂದ ತುಂಬಿಕೊಂಡಿವೆ. ಚರಂಡಿಗಳ ಪಕ್ಕದಲ್ಲಿ ಹಾಕುವ ತ್ಯಾಜ್ಯ ತೆಗೆಯದಿದ್ದರೆ ಮಳೆ ಸುರಿದು ಚರಂಡಿಯಲ್ಲಿ ನೀರು ತುಂಬಿಕೊಂಡರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತೆ ಎಂಬ ಆತಂಕ ಸ್ಥಳೀಯ ಜನರಿಗೆ ಕಾಡುತ್ತಿದೆ. ಮಳೆ ಸುರಿದರೆ ಚರಂಡಿಗಳು ಬ್ಲಾಕ್ ಆಗಿ, ಮತ್ತೆ ವಾಸನೆ ಹರಡುವ ಮೂಲಕ ಹಳೆ ಸ್ಥಿತಿಯೇ ಮುಂದುವರಿದರೆ ಸ್ವಚ್ಛತೆ ಮಾಡಿರುವುದು ವ್ಯರ್ಥವಾಗುತ್ತದೆ. ಅಧಿಕಾರಿಗಳು ಸೂಕ್ತವಾಗಿ ಕ್ರಿಯಾ ಯೋಜನೆ ಹಾಕಿಕೊಂಡು ಕೆಲಸ ಮಾಡಬೇಕು. ಸರ್ಕಾರದ ಹಣವನ್ನು ಸೂಕ್ತವಾಗಿ ಬಳಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಜನರು ಸಲಹೆ ನೀಡುತ್ತಿದ್ದಾರೆ.
ನಗರದ ಗಣೇಶ ಮೈದಾನ ಬಳಿಯ ರಸ್ತೆ, ನ್ಯೂ ಆದರ್ಶ ಕಾಲೋನಿಯ ರಸ್ತೆ, ರಾಂಪುರೆ ಕಾಲೋನಿ, ಖಾಜಿ ಕಾಲೋನಿ, ಬೊಮ್ಮಗೊಂಡೇಶ್ವರ ರಸ್ತೆ ಸೇರಿದಂತೆ ಬಹುತೇಕ ಕಾಲೋನಿಗಳ ರಸ್ತೆಗಳು ಒಂದೇ ಮಳೆಗೆ ಕೆಸರು ಗದ್ದೆ ಆಗುವ ಸಾಧ್ಯತೆ ಇದೆ. ಕೆಲ ರಸ್ತೆಗಳಲ್ಲಿ ಓಡಾಡಲು ಬಾರದ ಸ್ಥಿತಿ ಇದೆ. ಇನ್ನೂ ಕೆಲವು ಕಡೆಗಳಲ್ಲಿ ಜೀವ ಕೈಯಲ್ಲಿ ಹಿಡಿದು ವಾಹನ ಓಡಿಸಬೇಕಾಗಿದ ಸ್ಥಿತಿ ನಗರದಲ್ಲಿದ್ದು, ನಗರ ಸಭೆ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತದೆ ಎಂದಬುದನ್ನು ಕಾದು ನೋಡಬೇಕಾಗಿದೆ.
ಮಳೆಗಾಲ ಮುನ್ನ ನಗರದ ಎಲ್ಲಾ ಬಡಾವಣೆಗಳ ಹಾಗೂ ಮುಖ್ಯ ರಸ್ತೆಗಳ ಚರಂಡಿಗಳು, ನೀರು ಹರಿದುಹೊಗುವ ಕಾಲುವೆಗಳು ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. ಈ ಕುರಿತು ಅಕಾರಿಗಳ ಜತೆಗೆ ಸಭೆ ನಡೆಸಿದ್ದು, ಈ ವರ್ಷದ ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳು ಜನರು ಎದುರಿಸದಂತೆ ಸಿದ್ದತೆಗಳು ಮಾಡಿಕೊಳ್ಳಿವಂತೆ ಸೂಚಿಸಲಾಗಿದೆ. ಜೆಸಿಬಿ ಯಂತ್ರಗಳು ಸೇರಿದಂತೆ ಕಾರ್ಮಿಕರು ಕೂಡ ಸ್ವಚ್ಚತೆಯ ಕಾರ್ಯ ನಡೆಸುತ್ತಿದ್ದು, ಮಳೆಗಾಲಕ್ಕೂ ಮುನ್ನ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
•
ಶರಣಬಸಪ್ಪ ಕೊಟ್ಟಪಗೋಳ
ಪ್ರಭಾರಿ ನಗರಸಭೆ ಆಯುಕ್ತರು
ದುರ್ಯೋಧನ ಹೂಗಾರ