Advertisement

ಗುರು ನಾನಕ್‌ ಜಯಂತ್ಯುತ್ಸವಕ್ಕೆ ಭರದ ಸಿದ್ಧತೆ

01:14 PM Nov 10, 2019 | Naveen |

ಬೀದರ: ಸಿಖ್‌ ಬಾಂಧವರ ಪವಿತ್ರ ಸ್ಥಳ ಗುರುನಾನಕ ಮಂದಿರ (ಗುರುದ್ವಾರ)ದಲ್ಲಿ ಗುರುನಾನಕ್‌ ದೇವ್‌ ಮಹಾರಾಜರ 550ನೇ ಜನ್ಮ ಶತಾಬ್ದಿ ನಿಮಿತ್ತ ನ.10ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಗುರುದ್ವಾರ ಪರಿಸರದಲ್ಲಿ ಸಂಭ್ರಮ ಹೆಚ್ಚಿದೆ.

Advertisement

ಗುರುದ್ವಾರ ಈಗ ಸ್ವರ್ಣ ಮಂದಿರ ರೂಪ ಪಡೆದಿದ್ದು, ರಾತ್ರಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮಹಾದ್ವಾರ ಸೇರಿದಂತೆ ವಿವಿಧ ಕಟ್ಟಡಗಳು ವಿದ್ಯುತ್‌ ದೀಪದಿಂದ ಝಗಮಗಿಸುತ್ತಿದೆ. ಪರಿಸರದಲ್ಲಿ ಪೆಂಡಾಲ್‌ಗ‌ಳನ್ನು ಹಾಕಲಾಗಿದೆ. ಮೂರು ದಿನಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಾತ್ರವಲ್ಲದೇ ನೆರೆಯ ತೆಲಂಗಾಣ, ಆಂಧ್ರ, ಪಂಜಾಬ್‌ ಮತ್ತು ದೆಹಲಿಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಸಿಖ್‌ ಭಕ್ತ ಸಮೂಹ ಭಾಗವಹಿಸಲಿದೆ.

ಜಯಂತಿ ಅರ್ಥಪೂರ್ಣ, ಅದ್ಧೂರಿಯಾಗಿ ಆಯೋಜಿಸಲು ದೊಡ್ಡ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುದ್ವಾರ ಪ್ರಬಂಧಕ ಕಮಿಟಿಯಿಂದ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಗುರುದ್ವಾರ ಪರಿಸರದಲ್ಲಿ 400 ಕೋಣೆಗಳ ವಸತಿ ಸೌಲಭ್ಯ ಹೊರತುಪಡಿಸಿ ವಿವಿಧೆಡೆ ಬೃಹತ್‌ ಪೆಂಡಾಲ್‌ಗ‌ಳನ್ನು ಹಾಕಿ 1,000 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

ಇದರೊಟ್ಟಿಗೆ ಗುರುನಾನಕ್‌ ಶಿಕ್ಷಣ ಸಂಸ್ಥೆಯ ಅಧೀನದ ಶಾಲಾ- ಕಾಲೇಜುಗಳಲ್ಲಿಯೂ ತಂಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಕಕಾಲಕ್ಕೆ 1000 ಜನ ಭಕ್ತರು ಊಟ ಮಾಡಲು ಲಂಗರ್‌ (ಪ್ರಸಾದ) ಹಾಲ್‌ ಇದೆ. ಪ್ರತಿ ನಿತ್ಯ 50,000 ಜನ ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರತ್ಯೇಕ ನಾಲ್ಕು ಕಡೆ ಪ್ರತ್ಯೇಕ ಲಂಗರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಗುರುದ್ವಾರದ ವ್ಯವಸ್ಥಾಪಕ ಜ್ಞಾನಿ ದರ್ಬಾರ್‌ಸಿಂಗ್‌ ‘ಉದಯವಾಣಿ’ಗೆ ತಿಳಿಸಿದರು.

ಪ್ರತಿ ನಿತ್ಯ ವಿವಿಧ ಬಗೆಯ ಊಟದ ಮೆನು ತಯಾರಿಸಲಾಗಿದೆ. ರೋಟಿ, ತಂದೂರಿ, ವಿವಿಧ ಬಗೆಯ ತರಕಾರಿ ಪಲ್ಯ, ಸಿಹಿ ಪದಾರ್ಥಗಳನ್ನು ಒಳಗೊಂಡ ಭಕ್ಷ ಭೋಜನ ಸಿದ್ಧಪಡಿಸಲಾಗುತ್ತಿದೆ. ಬೆಳಗ್ಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಅಡುಗೆ ತಯಾರಿಸಲು ಮತ್ತು ಬಡಿಸಲು ಸುಮಾರು 400 ಜನರು ನಾಂದೇಡ್‌, ಪಂಜಾಬ್‌ನ ಕರ ಸೇವಕರು ಸನ್ನದ್ಧರಾಗಿದ್ದಾರೆ.

Advertisement

ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಪ್ರಬಂಧಕ ಕಮಿಟಿಯಿಂದ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಾಗಿದೆ. ಗುರುದ್ವಾರದ ಮುಖ್ಯ ಗೇಟ್‌ನಿಂದ ಮಂದಿರದವರೆಗೆ ತೆರಳು ಅನುಕೂಲವಾಗುವಂತೆ ಉಚಿತ ಬಸ್‌ನ ವ್ಯವಸ್ಥೆ ಮಾಡಲಾಗುತ್ತಿದೆ. ವಯೋವೃದ್ಧರಿಗಾಗಿ ಎಲೆಕ್ಟ್ರಿಕ್‌ ಆಟೋಗಳನ್ನು ಸಹ ನಿಯೋಜನೆ ಮಾಡಲಾಗುತ್ತಿದೆ ಎಂದು ಪ್ರಬಂಧಕ ಕಮಿಟಿ ಅಧ್ಯಕ್ಷ ಡಾ| ಬಲಬೀರ್‌ಸಿಂಗ್‌ ಮಾಹಿತಿ ನೀಡಿದ್ದಾರೆ.

ಮೊದಲ ದಿನವಾದ ನ.10ರಂದು ಜರುಗುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಮ್‌ ಖಾನ್‌, ಬಂಡೆಪ್ಪಾ ಖಾಶೆಂಪೂರ, ಬಿ. ನಾರಾಯಣರಾವ್‌, ರಘುನಾಥರಾವ ಮಲ್ಕಾಪೂರೆ, ವಿಜಯಸಿಂಗ್‌, ಚಂದ್ರಶೇಖರ ಪಾಟೀಲ, ಶರಣಪ್ಪಾ ಮಟ್ಟೂರ್‌, ಅರವಿಂದ ಕುಮಾರ ಅರಳಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷೆ ಲಕ್ಷ್ಮಣ ಬುಳ್ಳಾ, ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ್‌, ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ, ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ, ನಗರ ಸಭೆ ಆಯುಕ್ತ ಬಿ.ಬಸಪ್ಪಾ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next