Advertisement

ಪೊಲೀಸರು ಸಮಾಜ ಮುಖೀಯಾಗಿ ಕೆಲಸ ಮಾಡಲಿ

03:04 PM Sep 04, 2019 | Team Udayavani |

ಬೀದರ: ಪೊಲೀಸ್‌ ನೌಕರಿ ಎಲ್ಲರಿಗೂ ಇರುವ ಉದ್ಯೋಗಾರ್ಹತೆ ಅಲ್ಲ. ಉತ್ತಮವಾದ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ಇದ್ದಾಗ ಮಾತ್ರ ಪೊಲೀಸ್‌ ವೃತ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 120 ನಾಗರಿಕ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲಕ್ಕೆ ತಕ್ಕ ಹಾಗೆ ಹೊಸತನ ಕಲಿಯುವುದು ತುಂಬಾ ಅವಶ್ಯಕತೆ ಇದೆ. ಸದಾ ತೆರೆದ ಮನಸ್ಸಿನಿಂದ ಇರಬೇಕು. ಹೊಸ ಹೊಸ ಕಲಿಕೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರಲ್ಲಿ ನಾವು ಭಾಗಿಯಾದರೂ ಅವರಿಗಿಂತ ನಾವು ಭಿನ್ನರಾಗಿರುತ್ತೇವೆ. ನಾವು ದೇವರಲ್ಲ. ಸಮಾಜದ ಒಂದು ಭಾಗ. ಸಮಾಜ ಮುಖೀಯಾಗಿ ಕೆಲಸ ಮಾಡೋಣ. ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ. ಸಮಯವನ್ನು ಶ್ರದ್ಧೆ ಮತ್ತು ಶಿಸ್ತಿಗೆ ಬಳಸಿಕೊಳ್ಳೋಣ. ಸಮಾಜ ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡೋಣ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ ಮಾತನಾಡಿ, ಬೀದರ ಜಿಲ್ಲೆಯಲ್ಲಿ 1994ರಲ್ಲಿ ತರಬೇತಿ ಶಾಲೆ ಆರಂಭವಾಯಿತು. ಇಲ್ಲಿಯವರೆಗೆ 9 ತಂಡಗಳಿಗೆ ತರಬೇತಿ ನೀಡಲಾಗಿದೆ. ಇದು 10ನೇ ತಂಡ. ಈ ತಂಡದಲ್ಲಿ ಸ್ನಾತಕೋತ್ತರ ಪದವಿಧರರು, ಬಿ.ಎಡ್‌, ಡಿ.ಎಡ್‌, ಬಿಪಿಎಡ್‌ ಕಲಿತವರೂ ಇದ್ದಾರೆ ಎಂದು ತಿಳಿಸಿದರು. ಬಹುತೇಕ ಜನರು ಅಳಲು ತೋಡಿಕೊಂಡೇ ಪೊಲೀಸ್‌ ಕಚೇರಿಗೆ ಬರುತ್ತಾರೆ. ಅಂಥವರಿಗೆ ನಾವು ಸ್ಪಂದಿಸೋಣ. ಸಮಾಜ ಮುಖೀಯಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

Advertisement

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪಾಠ ಮಾಡಿದ ಸಂಪನ್ಮೂಲ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next