Advertisement

ಕಲಾವಿದರ ಕೈ ಹಿಡಿದ ಮಾಸಾಶನ

01:18 PM Dec 05, 2019 | Naveen |

ಶಶಿಕಾಂತ ಬಂಬುಳಗೆ

Advertisement

ಬೀದರ: ಸಾಂಸ್ಕೃತಿಕ ರಾಯಭಾರಿಗಳಾಗಿರುವ ಕಲಾವಿದರು, ಸಾಹಿತಿಗಳ ಮಾಸಾಶನ ಏರಿಸುವ ಮೂಲಕ ರಾಜ್ಯ ಸರ್ಕಾರ ಅವರ ಘನತೆ ಹೆಚ್ಚಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಎಸ್‌. ಮಾಲತಿ ಅವರು ನ.16ರಂದು ಆದೇಶ ಹೊರಡಿಸಿದ್ದು, ತಿಂಗಳಿಗೆ 1500 ಇದ್ದ ಮಾಸಾಶನವನ್ನು ಅಕ್ಟೋಬರ್‌ 1ರಿಂದಲೇ ಜಾರಿಗೆ ಬರುವಂತೆ 2000 ರೂ.ಗಳಿಗೆ ಹೆಚ್ಚಿಸಲು ಮಂಜೂರಾತಿ ನೀಡಿದ್ದಾರೆ.

ಇದರಿಂದ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಒಂದಿಷ್ಟು ನೆರವಾಗಲಿದೆ. ತನ್ನೆಲ್ಲ ಸಂಕಟ ಮರೆತು ಪ್ರೇಕ್ಷಕರ ಮನಸ್ಸು ಹಗುರಗೊಳಿಸುವ ಕಲಾವಿದರು ವೃದ್ಧಾಪ್ಯದಲ್ಲಿ ಗೌರವಯುತ ಜೀವನ ನಿರ್ವಹಣೆ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನ ಯೋಜನೆ ಜಾರಿಗೊಳಿಸಿ ಊರುಗೋಲಾಗಿದೆ.

ಬೆಲೆ ಏರಿಕೆ ಈ ದಿನಗಳಲ್ಲಿ ಸಂಕಷ್ಟದಲ್ಲಿರುವ ಕಲಾವಿದರ ಸಂಭಾವನೆ ಹೆಚ್ಚಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಸಾಂಸ್ಕೃತಿಕ ನೀತಿಯಲ್ಲೂ ಈ ಕುರಿತಂತೆ ಪ್ರಸ್ತಾಪಿಸಲಾಗಿತ್ತು. ಆರಂಭದಲ್ಲಿ ಮಾಸಿಕ 300 ರೂ. ಮಾಸಾಶನ ಪಡೆಯುತ್ತಿದ್ದ ಕಲಾವಿದರಿಗೆ 2013ರಲ್ಲಿ 1500 ರೂ.ಗಳಿಗೆ ಏರಿಸಲಾಗಿತ್ತು.

8.21 ಕೋಟಿ ಹೆಚ್ಚುವರಿ ಹೊರೆ: ಬೀದರ ಜಿಲ್ಲೆಯಲ್ಲಿ 522 ಮಂದಿ ಸೇರಿದಂತೆ ರಾಜ್ಯದಲ್ಲಿ ಸುಮಾರು 15 ಸಾವಿರ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಈಗ 2 ಸಾವಿರ ಮಾಸಿಕ ಸಂಭಾವನೆ ಏರಿಕೆ ಮಾಡಿರುವುದರಿಂದ ಸರ್ಕಾರಕ್ಕೆ 8,21,82,000 ರೂ. ಹೆಚ್ಚುವರಿ ಅನುದಾನದ ಹೊರೆ ಬೀಳಲಿದೆ. ಸದರಿ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2205-00-102-01-18-251 ರಡಿ ಭರಿಸಲು ಆದೇಶದಲ್ಲಿ ಸೂಚಿಸಲಾಗಿದೆ.

Advertisement

ವೃದ್ಧಾಪ್ಯದಲ್ಲಿ ಕಲಾವಿದರಿಗೆ ಬೇರೆ ಆದಾಯ ಇಲ್ಲ. ಅವರು ಸರ್ಕಾರದ ಮಾಸಾಶನವನ್ನೇ ನಂಬಿ ಬದುಕುತ್ತಿದ್ದಾರೆ. ಅಗತ್ಯ ಔಷಧೋಪಚಾರ ಸೇರಿದಂತೆ ಜೀವನ ನಿರ್ವಹಣೆಗೆ ಅಗತ್ಯವಾದಷ್ಟು ಗೌರವಧನ ನೀಡಬೇಕೆಂದು ಕಲಾವಿದರ ಸಂಘಟನೆಗಳ ಒತ್ತಾಯವಾಗಿತ್ತು. ಕನಿಷ್ಠ ಒಂದು ಸಾವಿರ ರೂ.ವರೆಗೆ ಹೆಚ್ಚಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ರಾಜ್ಯದಲ್ಲಿ ನೆರೆ-ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆರ್ಥಿಕ ಸಂಪನ್ಮೂಲಕ್ಕೆ ಸೀಮಿತವಾಗಿ ಮಾಸಾಶನವನ್ನು 500 ರೂ.ಗೆ ಹೆಚ್ಚಿಸಿದೆ.

ಸಂಭಾವನೆ ಹೆಚ್ಚಳ ಜತೆಗೆ ಕಲಾವಿದರ ವಯೋಮಿತಿಯನ್ನು 60 ರಿಂದ 55ಕ್ಕೆ ಇಳಿಸಬೇಕು ಎನ್ನುವುದು ಬೇಡಿಕೆಗಳಲ್ಲಿ ಒಂದಾಗಿತ್ತು. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಉಮಾಶ್ರೀ ಅವರಿಂದ ಭರವಸೆಯೂ ಸಿಕ್ಕಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಮಾಸಾಶನ 5 ಸಾವಿರ ರೂ. ಗಳಿಗೆ ಹೆಚ್ಚಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವಂತೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ 2 ಸಾವಿರಕ್ಕೆ ಏರಿಸಿದೆ. ಮುಂದಿನ ದಿನದಲ್ಲಿ ಜೀವನ ನಿರ್ವಹಣೆಗೆ ಅನುಕೂಲ ತಕ್ಕಂತೆ ಮತ್ತೂಮ್ಮೆ ಪರಿಷ್ಕರಣೆ ಮಾಡಬೇಕು. ಶೀಘ್ರ ಗೌರವಧನ ಪಡೆಯಲು ಕಲಾವಿದರ ವಯೋಮಿತಿಯನ್ನು 55 ವರ್ಷಕ್ಕೆ ಇಳಿಕೆ ಮಾಡಬೇಕು.
.ವಿಜಯಕುಮಾರ ಸೋನಾರೆ,
ಮಾಜಿ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ.

Advertisement

Udayavani is now on Telegram. Click here to join our channel and stay updated with the latest news.

Next