ಬೀದರ: ಭಿಕ್ಷೆ ಬೇಡುವುದು ಹಾಗೂ ಚಿಂದಿ ಆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೋಳಿ ಅವರ ನೇತೃತ್ವದಲ್ಲಿ ಮಂಗಳವಾರ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಮೈಲೂರ, ಗುಂಪಾ, ಕುಂಬರವಾಡಾ, ಮಂಗಲಪೇಟ್, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ನೌಬಾದ್, ಪ್ರತಾಪನಗರ, ಆಟೋ ನಗರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುವ ಮತ್ತು ಚಿಂದಿ ಆಯುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಎಂ., ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರೇಮಸಾಗರ ದಾಂಡೇಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗ, ಕಾರ್ಮಿಕ ನಿರೀಕ್ಷಕರಾದ ಪ್ರಸನ್ನಕುಮಾರ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪೂರೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ, ಕಾರ್ಮಿಕ ಇಲಾಖೆಯ ಯೋಜನಾಧಿಕಾರಿ ಅರ್ಜುನ ಸಿತಾಳಗೇರಾ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕವಿತಾ ಹುಷಾರೆ, ಪೊಲೀಸ್ ಇಲಾಖೆಯ ಕಲ್ಲಪ್ಪ, ಮಲ್ಲಮ್ಮಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಡಾನ್‌ಬಾಸ್ಕೋ ಮಕ್ಕಳ ಸಹಾಯವಾಣಿಯ ಪದಾಧಿಕಾರಿಗಳು ಇರುವ ಒಟ್ಟು 5 ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಅವರು ನಗರದ ವಡ್ಡರ್ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿದರು. ಯಾರಾದರೂ ತಮ್ಮ ಮಕ್ಕಳನ್ನು ಚಿಂದಿ ಆಯಲು ಅಥವಾ ಭಿಕ್ಷಾಟನೆಗೆ ಹಚ್ಚಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಭಿಕ್ಷಾಟನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಅಲ್ಲಿನ ಹಲವು ಮನೆಗಳಿಗೆ ಭೇಟಿ ನೀಡಿ, ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿದೆಯೇ ಎನ್ನುವ ಬಗ್ಗೆ ಪರಿಶೀಲಿಸಿದರು. ಶಾಲೆಯಿಂದ ಹೊರಗುಳಿದ ಒಂದು ಮಗು ಪತ್ತೆಯಾದ ಕೂಡಲೇ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೆ ಆ ಮಗುವನ್ನು ಪುನಃ ಶಾಲೆಗೆ ಸೇರಿಸಿದರು.
ಸರ್ಕಾರಿ ಶಾಲೆಯ ಹತ್ತಿರ ಗುಜರಿ ಅಂಗಡಿಯವರು ಹಳೆಯ ಸಾಮಾನುಗಳನ್ನು ಹಾಕಿರುವುದರಿಂದ ಶಾಲೆ ನಡೆಸುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು, ನ್ಯಾಯಾಧೀಶರ ಗಮನಕ್ಕೆ ತಂದರು. ಕೂಡಲೇ ಬುಲ್ಡೋಜರ್‌ಗಳನ್ನು ತರಿಸಿ ಎಲ್ಲಾ ವಸ್ತುಗಳನ್ನು ಖಾಲಿ ಮಾಡಿಸಿ ಆವರಣ ಸ್ವಚ್ಛಗೊಳಿಸಲಾಯಿತು.
ಬಳಿಕ ಮೈಲೂರಿನಲ್ಲಿರುವ ಬಾಲಕ ಮತ್ತು ಬಾಲಕಿಯರ ಬಾಲ ಮಂದಿರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಆ ಪ್ರದೇಶದಲ್ಲಿ ಭಿಕ್ಷೆ ಬೇಡುವ ಮಹಿಳೆಗೆ ಕಾನೂನಿನ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕ ಶಂಕ್ರಪ್ಪ ಜನಕಟ್ಟಿ ಹಾಗೂ ಇತರರು ಇದ್ದರು.