Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೂ.27ರಂದು ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವಿವಿಧ ಪ್ರಗತಿ ಕಾಮಗಾರಿಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
Related Articles
Advertisement
ಯೂರಿನರಿ ಯೂನಿಟ್ ಅಳವಡಿಕೆ: ಜಿಲ್ಲೆಯ 1,143 ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತಿ 10 ಮಕ್ಕಳಿಗೆ ಒಂದು ಮೂತ್ರ ವಿಸರ್ಜನಾ ಪರಿಕರ (ಯೂರಿನರಿ ಯೂನಿಟ್) ಅಳಡಿಕೆಗೆ 3.79 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಜಿಲ್ಲೆಯ ಬಹುತೇಕ ಶಾಲೆಗಳ ವಿದ್ಯಾರ್ಥಿಗಳು ರಸ್ತೆ ಬದಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ತಿಳಿದ ಶಿಕ್ಷಣ ಅಧಿಕಾರಿಗಳು ಇದೀಗ ಜಿಲ್ಲೆಯ ಸರ್ಕಾರಿ ಶಾಲೆಯ ಒಟ್ಟು 1,26,375 ವಿದ್ಯಾರ್ಥಿಗಳಿಗೆ 12,638 ಮೂತ್ರಾಲಯಗಳ ಸ್ಥಾಪನೆಗೆ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಯಾವ ಶಾಲೆಗಳಲ್ಲಿ ವ್ಯವಸ್ಥೆಗಳು ಇಲ್ಲವೊ ಆ ಶಾಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆಟದ ಮೈದಾನಗಳು ಅಗತ್ಯ: ಜಿಲ್ಲೆಯ ಐದು ತಾಲೂಕುಗಳ ಪ್ರತಿಯೊಂದು ಹೋಬಳಿಯಲ್ಲಿ ತಲಾ ಒಂದು ಮಾದರಿ ಆಟದ ಮೈದಾನ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು 2.60 ಕೋಟಿ ವೆಚ್ಚದಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಸದ್ಯ ಮಕ್ಕಳ ಆಟಕ್ಕೆ ಸೂಕ್ತ ವ್ಯವಸ್ಥೆಗಳು ಇಲ್ಲದ ಕಾರಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕ್ರಿಡೆಯಲ್ಲಿ ಹಿಂದೆ ಉಳಿಯುತ್ತಿದ್ದು, ಇದೀಗ ಸೂಕ್ತ ವ್ಯಸ್ಥೆ ಕಲ್ಪಿಸಿದರೆ ಮಕ್ಕಳ ಆಟಕ್ಕೆ ಅನುಕೂಲವಾಗಲಿದೆ. ಔರಾದ ತಾಲೂಕಿನಲ್ಲಿ 6, ಬಸವಕಲ್ಯಾಣ ತಾಲೂಕಿನಲ್ಲಿ 6, ಭಾಲ್ಕಿ ತಾಲೂಕಿನಲ್ಲಿ 6, ಬೀದರ ತಾಲೂಕಿನಲ್ಲಿ 4, ಹುಮನಾಬಾದ ತಾಲೂಕಿನಲ್ಲಿ 4 ಒಟ್ಟಾರೆ 26 ಆಟದ ಮೈದಾನ ನಿರ್ಮಾಣಗೊಳ್ಳಲಿವೆ.
ಶಿಕ್ಷಣ ಸಾಮರ್ಥ್ಯ ಸೌಧ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಂದು ಶಿಕ್ಷಣ ಸಾಮರ್ಥ್ಯ ಸೌಧ ಸ್ಥಾಪನೆಗೆ 2 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಧ ತರಬೇತಿ, ಸರಕಾರಿ ಸೇವೆಯಲ್ಲಿ ವೃತ್ತಿ ಪ್ರಾವಿಣ್ಯತೆ ಹಾಗೂ ನೂತನ ವಿಷಯಗಳನ್ನು ಮನವರಿಕೆ ಮಾಡಿಕೊಳ್ಳಲು ಆಯಾ ತಾಲೂಕು ಕೇಂದ್ರಗಳಲ್ಲಿ ಶಿಕ್ಷಣ ಸಾಮರ್ಥ್ಯ ಸೌಧ ಅನುಕೂಲವಾಗಲಿದೆ. ಪ್ರತಿ ಹಂತದ 98 ವಿವಿಧ ವಿಷಯ ವಸ್ತುವನ್ನೊಳಗೊಂಡ, ಶಿಕ್ಷಕರ ವೃತ್ತಿ ಪ್ರಾವಿಣ್ಯತೆ ಹೆಚ್ಚಳಕ್ಕೆ ಪೂರಕವಾಗಲು ನೂತನ ಕಟ್ಟಡದ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ.
ಅಕ್ಷರ ದಾಸೋಹ ಭವನ: ಜಿಲ್ಲೆಯಲ್ಲಿನ 55 ಪ್ರಾಥಮಿಕ ಹಾಗೂ 30 ಪ್ರೌಢ ಶಾಲೆಗಳಲ್ಲಿ ಸುಮಾರು 11 ಕೋಟಿ ವೆಚ್ಚದಲ್ಲಿ ಅಕ್ಷರ ದಾಸೋಹ ಭವನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ 1,248 ಪ್ರಾಥಮಿಕ ಮತ್ತು 165 ಸರಕಾರಿ ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು, ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿ ಊಟ ತಯಾರಿಸಲು ಸೂಕ್ತ ಕೋಣೆಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ಭವನ ನಿರ್ಮಾಣಮಾಡುವ ಮೂಲಕ ಆ ಭವನದಲ್ಲಿಯೇ ಏಕಕಾಲಕ್ಕೆ 200 ವಿದ್ಯಾರ್ಥಿಗಳು ಕುಳಿತು ಊಟ ಮಾಡಬಹುದಾಗಿದೆ ಎಂದು ವಿವರಿಸಲಾಗಿದೆ.
ಹೊಸ ಬಿಇಒ ಕಚೇರಿ: ಜಿಲ್ಲೆಯಲ್ಲಿ ಘೋಷಣೆಯಾದ ಮೂರು ಹೊಸ ತಾಲೂಕು ಕೇಂದ್ರಗಳಲ್ಲಿ 1.50 ಕೋಟಿ ವೆಚ್ಚದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿಟಗುಪ್ಪ ಪಟ್ಟಣದಲ್ಲಿ 50 ಲಕ್ಷದಲ್ಲಿ ನೂತನ ಕಟ್ಟಡ, ಹುಲಸೂರ ಹಾಗೂ ಕಮಲನಗರ ತಾಲೂಕಿನಲ್ಲಿ ತಲಾ 50 ಲಕ್ಷದಲ್ಲಿ ಹೊಸ ಬಿಇಒ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರತಿ ಗ್ರಾಪಂಗೆ ಇಂಗ್ಲಿಷ್ ಶಾಲೆ: 2019-20ನೇ ಸಾಲಿನಲ್ಲಿ ಆರಂಭಗೊಂಡ 26 ಆಂಗ್ಲ ಮಾಧ್ಯಮ ಶಾಲೆಗಳ ಮಾದರಿಯಲ್ಲಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ತಲಾ ಒಂದು ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ರೂ. 9.30 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಖಾಸಗಿ ಶಾಲೆಗಳು ಪಾಲಕರ ಮೇಲೆ ಹೇರುತ್ತಿರುವ ದುಬಾರಿ ಶುಲ್ಕ ವಸೂಲಾತಿ ತಡೆಯುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಸೂಕ್ತ ವ್ಯವಸ್ಥೆಗಳ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಜನರು ಶಿಕ್ಷಣ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಕೂಡ ಸರ್ಕಾರದ ಗಮನಕ್ಕೆ ತರಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆ: 2019-20ನೇ ಸಾಲಿನಲ್ಲಿ ಹೋಬಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಂದಿದ್ದು, ಸುಮಾರು 6.25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದಾರೆ. ಸರಕಾರಿ ಶಾಲೆಗಳ ಗುಣಮಟ್ಟವನ್ನು ಉತ್ತಮಪಡಿಸುವ ಭಾಗವಾಗಿ ಹಾಗೂ 1ನೇ ತರಗತಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 12ನೇ ತರಗತಿ ವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ಸೌಲಭ್ಯ ನೀಡುವ ಉದ್ದೇಶ ಇದಾಗಿದೆ. ಸದ್ಯ ಜಿಲ್ಲೆಯಲ್ಲಿ 6 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಎಲ್ಲ 31 ಹೋಬಳಿಗೆ ಒಂದರಂತೆ ಶಾಲೆ ತೆರೆಯಲು ಉದ್ದೇಶಿಸಲಾಗಿದೆ. ವಿವಿಧ ಪಂಚಾಯತ, ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ವಿವಿಧ ಗ್ರಾಮಸ್ಥರು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಕ್ಕೆ ಒತ್ತಾಯಿಸುತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.
ಆಂಗ್ಲ ಶಾಲೆಗೆ ಅನುದಾನ ಬೇಡಿಕೆ: 2019-20ನೇ ಸಾಲಿನಲ್ಲಿ ಆರಂಭಗೊಂಡ ಎಲ್ಕೆಜಿ ಮತ್ತು 1ನೇ ತರಗತಿ ಶಾಲೆಗಳ ಅಭಿವೃದ್ಧಿಗಾಗಿ 60 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಪ್ರತಿಯೊಂದು ಶಾಲೆಯಲ್ಲಿ 30 ವಿದ್ಯಾರ್ಥಿಗಳ ಲೆಕ್ಕದಲ್ಲಿ ದಾಖಲಾತಿ ನಡೆದಿದ್ದು, ಪ್ರತಿಯೊಂದು ಶಾಲೆಗೆ ತಲಾ 10 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.