ಬೀದರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಎಂಜಿನೀಯರಿಂಗ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ಕೋರೆಕಲ್ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಕೆರೆಯ ಮಣ್ಣನ್ನು ಕೆರೆ ದಡದಲ್ಲಿ ಸುರಿಯದೇ ಬೇರೆ ಕಡೆಗೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಔರಾದ್ ಪಟ್ಟಣಕ್ಕೆ ತೆರಳಿ, ಅಲ್ಲಿ ನೂತನವಾಗಿ ನಿರ್ಮಾಗೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡಗಳನ್ನು ವೀಕ್ಷಿಸಿ, ಅವುಗಳ ಗುಣಮಟ್ಟ ಪರಿಶೀಲಿಸಿದರು.
ಚಿಂತಾಕಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರಾಜೀವಗಾಂಧಿ ಸೇವಾ ಕೇಂದ್ರದಡಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಕಟ್ಟಡ ಹಾಗೂ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಪರಿಶೀಲಿಸಿದರು. ನೂತನ ಆರೋಗ್ಯ ಕೇಂದ್ರದ ಕಟ್ಟಡದ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.
ಗುಡಪಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ನಿರ್ಮಾಣಗೊಂಡ ಗ್ರಾಮ ಪಂಚಾಯತ್ ಕಟ್ಟಡವನ್ನು ವೀಕ್ಷಿಸಿದರು. ಬಳಿಕ ಜೋಜನಾ ಗ್ರಾಮದಲ್ಲಿ ದಾಸ್ತಾನು ಗೋದಾಮು ಕಟ್ಟಡ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಕಾರ್ಯದರ್ಶಿ ಸೂರ್ಯಕಾಂತ ಜೋಜನಾ, ಔರಾದ ತಾಲೂಕು ಪಂಚಾಯತ್ ಇಒ ಮಾಣಿಕರಾವ್ ಪಾಟೀಲ, ತಹಶೀಲ್ದಾರ್ ಚಂದ್ರಶೇಖರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.