ಬೀದರ: ಮಗುವಿಗೆ ಸ್ತನ್ಯಪಾನ ಮಾಡಿಸಿದರೆ ತಾಯಿಯ ಸೌಂದರ್ಯ ಹಾಳಾಗುತ್ತದೆ ಎಂದು ಹೇಳುವುದು ಸುಳ್ಳು. ಬದಲಾಗಿ ಎದೆಹಾಲು ಉಣಿಸಿದರೆ ಮಗುವಿನ ದೇಹದಲ್ಲಿ ಪೌಷ್ಟಿಕತೆ ಬೆಳೆದು ಆರೋಗ್ಯಯುತವಾಗಿ ಬೆಳೆಯುವುದರೊಂದಿಗೆ ತಾಯಿಯ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ. ಮಂಜುನಾಥ ಹೇಳಿದರು.
ನಗರದ ಅಬ್ದುಲ್ ಫೈಜ್ ದರ್ಗಾ ಸಮೀಪದ ಎಸ್.ಕೆ. ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಂದಿರು ತಮ್ಮ ಮಕ್ಕಳಿಗೆ ಜನನದಿಂದ ಕನಿಷ್ಠ 6 ತಿಂಗಳ ವರೆಗೆ ಎದೆಹಾಲು ಉಣಿಸಬೇಕು. ಇದರಿಂದ ಮಕ್ಕಳು ಆರೋಗ್ಯವಾಗಿ ಹಾಗೂ ಪೌಷ್ಟಿಕತೆ ಕೊರತೆ ಉಂಟಾಗುವುದಿಲ್ಲ. ಉಹಾಪೋಹದ ಮಾತುಗಳಿಗೆ ತಾಯಂದಿರು ಕಿವಿಗೊಡಬಾರದು. ತಾಯಿ ಪೌಷ್ಟಿಕತೆ ಇರುವ ಕಾಳು, ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಸೇವಿಸಬೇಕು ಮತ್ತು ಮಗು ಬೆಳೆಯುತ್ತಿದ್ದಂತೆ ಅದಕ್ಕೂ ತಿನ್ನಿಸಬೇಕು. ಪ್ರತಿ ತಿಂಗಳು ಮಗುವಿನ ತೂಕ, ಬೆಳವಣಿಗೆ ಮತ್ತು ಆರೋಗ್ಯದ ಬಗ್ಗೆ ತಾಯಿ ಗಮನಹರಿಸಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಏರ್ಪಡಿಸಿ ತಾಯಂದಿರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಮಾತನಾಡಿ, ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಉತ್ತಮ ಆಹಾರ ಮತ್ತು ಶುದ್ಧ ಕುಡಿಯುವ ನೀರು ಸೇವಿಸಬೇಕು. ಬೇಕರಿ ಪದಾರ್ಥಗಳನ್ನು ತ್ಯಜಿಸಬೇಕು. ದೇಸಿ ಆಹಾರಗಳಾದ ಹಾಲು ಹಣ್ಣು ತರಕಾರಿ ಹೆಚ್ಚಾಗಿ ಸೇವಿಸಬೇಕು. ಹೀಗಾದಾಗ ಮಾತ್ರ ಸದೃಢ ದೇಶ ನಿರ್ಮಿಸಲು ಸಾಧ್ಯ ಅಲ್ಲದೆ, ಮಕ್ಕಳಲ್ಲಿ ಅಪೌಷ್ಠಿಕರೆ ಕೊರತೆ ಉಂಟಾಗುವುದಿಲ್ಲ ಎಂದರು.
ಡಾ| ಅನಿಲಕುಮಾರ ಚತುರೆ ಮಾತನಾಡಿ, ಒಂದು ಮಗು ಸದೃಢವಾಗಿ ಬೆಳೆಯಬೇಕಾದರೆ ಅದರಲ್ಲಿ ತಾಯಿ ಪಾತ್ರ ಬಹಳಷ್ಟಿರುತ್ತದೆ. ಆದ್ದರಿಂದ, ತಾಯಿಯಾದವಳು ತನ್ನ ಮಗುವನ್ನು ಕಾಳಜಿವಹಿಸಿ ಪೌಷ್ಟಿಕ ಆಹಾರ ತಿನ್ನಿಸಿ ಆರೋಗ್ಯವಂತನನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಪೌಷ್ಟಿಕತೆ ಕುರಿತು ಸರ್ಕಾರದಲ್ಲಿ ನಾನಾ ಯೋಜನೆಗಳಿವೆ. ಅವುಗಳನ್ನು ಪ್ರತಿಯೊಬ್ಬ ತಾಯಂದಿರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ‘ಆರೋಗ್ಯವಂತ ಮಗು’ ಪ್ರಶಸ್ತಿಯನ್ನು ಸ್ಟೆಲನ್ ಸ್ಟಿಫನ್ ಸ್ಟೆಲ್ಲಾ, ಅಬ್ಟಾಸ್ ಫಯಾಜಖಾನ್ ಮತ್ತು ಅಗಸನಾಗ ಫಯಾಜೊದ್ದಿನ್ ಎಂಬ ಮೂರು ಮಕ್ಕಳಿಗೆ ಪ್ರದಾನ ಮಾಡಲಾಯಿತು. ತಾಯಂದಿರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ವಿತರಿಸಲಾಯಿತು.
ಏಡನ್ ಕಾಲೋನಿಯ ನಗರಸಭೆ ಸದಸ್ಯ ಫಿಲೋಮನ್ ರಾಜ್, ಮುಖಂಡರಾದ ಎಂ.ಡಿ.ನಿಸಾರ್, ಪೊಲೀಸ್ ಆರೋಗ್ಯ ಕೇಂದ್ರದ ಸವಿತಾ, ಚಿಕ್ಕಮಣಿ ಶಾಲೆಯ ಮುಖ್ಯ ಗುರು ಶರಣಪ್ಪ ಸಿಂಗಾರೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಸಂಯೋಜಕ ಶರಣು ಅಳ್ಳೆ, ಸಹಾಯಕ ಸಂಯೋಜಕ ರಾಜಕುಮಾರ ಗೋರ್ಟಾ, ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಲಕ್ಷ್ಮೀ ದಂಡೆ, ಖಜಾಂಚಿ ಬಸಮ್ಮಾ ದಂಡೆ, ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಕಲಾ, ಮಂಜುಳಾ, ಸುಜಾತಾ, ಮನರಂಜಿನಿ ಮಂಗಲಪೇಟ, ಮಂಜುಳಾ ಮಂಗಲಪೇಟ, ರೀಟಾರಾಣಿ, ಕರುಣಾ ಈಡಗೇರಿ, ಶಕುಂತಲಾ, ಸ್ವರೂಪ ಉಪಸ್ಥಿತರಿದ್ದರು.