Advertisement

ಮೂಲೆ ಸೇರಿದ ಎಂಆರ್‌ಐ ಸ್ಕ್ಯಾನ್‌ಯಂತ್ರ!

12:04 PM Oct 18, 2019 | Naveen |

„ಶಶಿಕಾಂತ ಬಂಬುಳಗೆ
ಬೀದರ: ರೋಗಗಳ ಕ್ಲಿಷ್ಟಕರ ಪರಿಸ್ಥಿತಿಯನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಬೀದರ ಬ್ರಿಮ್ಸ್‌ ಆಸ್ಪತ್ರೆಗೆ ಸರ್ಕಾರ ಎಂಆರ್‌ಐ ಸ್ಕ್ಯಾನ್
ಯಂತ್ರ ಒದಗಿಸಿದೆ. ಆದರೆ, ಯಂತ್ರದ ಸದ್ಬಳಕೆ ಮಾಡಿಕೊಳ್ಳಬೇಕಾದ ಬ್ರಿಮ್ಸ್‌ ಅಧಿಕಾರಿಗಳ ನಿಷ್ಕಾಳಜಿತನದಿಂದಾಗಿ ರೋಗಿಗಳಿಗೆ ವರದಾನ ಆಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಎಂಆರ್‌ಐ ಯಂತ್ರ ಧೂಳು ತಿನ್ನುತ್ತಿದೆ.

Advertisement

ಸರ್ಕಾರ ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಇದಕ್ಕಾಗಿ ಕೋಟಿ ಕೋಟಿ ರೂ. ಖರ್ಚು ಮಾಡಿ ಅಗತ್ಯ ಯಂತ್ರೋಪಕರಣಗಳನ್ನು ಪೂರೈಸುತ್ತಿದೆ. ಅದೇ ರೀತಿ ಬ್ರಿಮ್ಸ್‌ ಆಸ್ಪತ್ರೆಗೆ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರ ಒದಗಿಸಿದೆ. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣಕ್ಕಾಗಿ ಅಧಿಕಾರಿಗಳು ಯಂತ್ರೋಪಕರಣಗಳನ್ನು ಮೂಲೆ ಸೇರುವಂತೆ ಮಾಡುತ್ತಿರುವುದು ವಿಪರ್ಯಾಸ.

ಶಸ್ತ್ರಚಿಕಿತ್ಸೆ ಇಲ್ಲದೆ ದೇಹ ಅಥವಾ ಮೆದುಳಿನ ಒಳಭಾಗದ ಸಮಸ್ಯೆಗಳನ್ನು ಪತ್ತೆಹಚ್ಚಲು ಎಂಆರ್‌ಐ ಯಂತ್ರ ಬಹುಮುಖ್ಯ ಪಾತ್ರ ವಹಿಸುತ್ತದೆ. ಅತಿ ದುಬಾರಿ ವೆಚ್ಚದ ಪರೀಕ್ಷೆ ಆಗಿರುವುದರಿಂದ ಇದರ ಸೇವೆ ಬಡ ರೋಗಿಗಳ ಪಾಲಿಗೆ ಗಗನ ಕುಸುಮ ಆಗಿದೆ. ಹಾಗಾಗಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಕೆಲ ವರ್ಷಗಳ ಹಿಂದೆ ಬ್ರಿಮ್ಸ್‌ ಆಸ್ಪತ್ರೆಗೆ ಯಂತ್ರವನ್ನು ಮಂಜೂರು ಮಾಡಿದೆ. ಎಂಆರ್‌ಐ ಘಟಕ ಸ್ಥಾಪಿಸಿ ಹಲವು ತಿಂಗಳುಗಳು ಕಳೆದರೂ ವಿದ್ಯುತ್‌ ಸಂಪರ್ಕದ ಕೊರತೆಯಿಂದಾಗಿ ರೋಗಿಗಳಿಗೆ ಸೇವೆ ಸಿಗದಂತಾಗಿದೆ.

ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಿ 8 ಕೋಟಿ ರೂ. ವೆಚ್ಚದಲ್ಲಿ ಫಿಲಿಫ್ಸ್ ಕಂಪನಿಯ ಎಂಆರ್‌ಐ ಸ್ಕ್ಯಾನ್‌ ಯಂತ್ರಗಳ ಅಳವಡಿಕೆಗಾಗಿ ಸಿವಿಲ್‌ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಎಕ್ಸ್‌-ರೇ ಘಟಕದ ಟೆಕ್ನಿಷಿಯನ್‌, ವೈದ್ಯರು, ಸ್ಟಾಫ್‌ ನರ್ಸ್‌ಗಳನ್ನೇ ಸದ್ಯಕ್ಕೆ ಎಂಆರ್‌ಐ ಸ್ಕ್ಯಾನಿಂಗ್‌ ಗೆ ಬಳಸಿಕೊಳ್ಳಲು ಉದ್ದೇಶಸಲಾಗಿದೆ. ಆದರೆ, ಯಂತ್ರ ಕಾರ್ಯಾರಂಭಕ್ಕೆ ವಿದ್ಯುತ್‌ ಸಂಪರ್ಕ ಕೊಡದೇ ಇರುವುದು ಸೇವೆ ಅಲಭ್ಯಕ್ಕೆ ಕಾರಣವಾಗಿದೆ.

ಬೀದರ ಜಿಲ್ಲಾ ಆಸ್ಪತ್ರೆಯೊಂದರಲ್ಲೇ ಪ್ರತಿ ನಿತ್ಯ ಕನಿಷ್ಠ 30 ಜನ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್‌ನ ಅಗತ್ಯವಿದೆ. ಆದರೆ, ಬ್ರಿಮ್ಸ್‌ನಲ್ಲಿ ಎಂಆರ್‌ಐ ಯಂತ್ರ
ಇದ್ದರೂ ಸಹ ಅಪ್ರಯೋಕ ಆಗಿದ್ದು, ರೋಗಿಗಳು ಸ್ಕ್ಯಾನಿಂಗ್‌ ಮಾಡಿಸುವ ಸಲುವಾಗಿ ಖಾಸಗಿ ಸ್ಕ್ಯಾನ್‌ ಸೆಂಟರ್‌ಗಳ ಬಾಗಿಲು ತಟ್ಟಬೇಕಾಗಿದೆ. ಪ್ರತಿ ಎಂಆರ್‌ ಐಗೆ 3ರಿಂದ 5 ಸಾವಿರ ರೂ. ತಗಲುತ್ತದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಬಡವರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ದುಬಾರಿ ಬೆಲೆಯ ಪರೀಕ್ಷೆ ಅವರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ.

Advertisement

ಇತ್ತೀಚೆಗೆ ಸಂಸದ ಭಗವಂತ ಖೂಬಾ ಆಸ್ಪತ್ರೆಗೆ ಭೇಟಿ ನೀಡಿ ಎಂಆರ್‌ಐ ಸೇವೆ ಆರಂಭಕ್ಕೆ ಕ್ರಮ ವಹಿಸುವಂತೆ ಖಡಕ್‌ ಎಚ್ಚರಿಕೆ ನೀಡಿದ್ದರೂ ಸಹ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಈಗಾಗಲಾದರೂ ಜಿಲ್ಲಾಡಳಿತ ಬ್ರಿಮ್ಸ್‌ನತ್ತ ಗಮನ ಹರಿಸಿ ಎಂಆರ್‌ಐ ಘಟಕದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಬಡ ರೋಗಿಗಳಿಗೆ ಕೈಗುಟುವ ದರದಲ್ಲಿ ಯಂತ್ರದ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next