ಬೀದರ: ಗಡಿ ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ.33ರಷ್ಟು ಕೊರತೆ ಇದ್ದರೂ ಕೂಡ ಒಂದು ವಾರದಿಂದ ಜಿಲ್ಲಾದ್ಯಂತ 43.65 ಮಿ.ಮೀ. ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಜು.21ರ ವರೆಗೆ ಶೇ.33ರಷ್ಟು ಮಳೆ ಕೊರತೆಯಾಗಿದೆ. ಈ ಎರಡು ತಿಂಗಳಲ್ಲಿ ಸರಾಸರಿ 243.60 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 162.73 ಮಿ.ಮೀ. ಮಳೆಯಾಗಿದೆ. ಈ ವರೆಗಿನ ಒಟ್ಟಾರೆ ಮಳೆ ವಿವರ ನೋಡುವುದಾದರೆ, ಜನವರಿ ತಿಂಗಳಿಂದ ಈ ವರೆಗೆ 309 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 180.46 ಮಿ.ಮೀ. ಮಳೆಯಾಗಿದ್ದು ಸರಾಸರಿ ಶೇ.41.75ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿದೆ. ಜುಲೈ ತಿಂಗಳಲ್ಲಿ ಶೇ.38ರಷ್ಟು ಮಳೆ ಕೊರತೆ ಉಂಟಾಗಿದೆ. ಈ ತಿಂಗಳಲ್ಲಿ ಸರಾಸರಿ 116.10 ಮಿ.ಮೀ. ಮಳೆ ಆಗಬೇಕಿತ್ತು ಆದರೆ, 71.81 ಮಿ.ಮೀ. ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ತಾಲೂಕುವಾರು ಮಳೆ ಪ್ರಮಾಣ: ಜೂನ್ ತಿಂಗಳಿಂದ ಮುಂಗಾರು ಮಳೆ ಆರಂಭಗೊಂಡಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರತೆ ಉಂಟಾಗಿದೆ. ಔರಾದ ತಾಲೂಕಿನಲ್ಲಿ ಶೇ.36, ಬೀದರ ತಾಲೂಕು ಶೇ.41, ಭಾಲ್ಕಿ ತಾಲೂಕು ಶೇ.34, ಬಸವಕಲ್ಯಾಣ ತಾಲೂಕು ಶೇ.16, ಹುಮನಾಬಾದ ತಾಲೂಕು ಶೇ.32ರಷ್ಟು ಮಳೆ ಕೊರತೆ ಇದೆ. ಆದರೆ ಜೂನ್ ತಿಂಗಳಲ್ಲಿ ಹಾಗೂ ಕಳೆದ ಒಂದು ವಾರದಿಂದ ವಿವಿಧೆಡೆ ಮಳೆ ಸುರಿದ ಹಿನ್ನೆಲೆಯಲ್ಲಿ ಆತ್ಮವಿಶ್ವಾಸದಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಏಳು ದಿನಗಳ ಮಳೆ ವಿವರ: ಒಂದು ವಾರದಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಔರಾದ ತಾಲೂಕಿನಲ್ಲಿ 40.1 ಮಿ.ಮೀ., ಬೀದರ ತಾಲೂಕಿನಲ್ಲಿ 50.7 ಮಿ.ಮೀ., ಭಾಲ್ಕಿ ತಾಲೂಕಿನಲ್ಲಿ 45.2 ಮಿ.ಮೀ., ಬಸವಕಲ್ಯಾಣ ತಾಲೂಕಿನಲ್ಲಿ 43.6 ಮಿ.ಮೀ., ಹುಮನಾಬಾದ ತಾಲೂಕಿನಲ್ಲಿ 39.9 ಮಿ.ಮೀ. ಮಳೆಯಾಗಿದೆ.
ಬಿತ್ತನೆ ಕಾರ್ಯ: ಜುಲೈ ಮೊದಲ ವಾರದ ವರೆಗೆ ಜಿಲ್ಲಾದ್ಯಂತ ಶೇ.60ರಷ್ಟು ರೈತರು ಬಿತ್ತನೆ ಕಾರ್ಯ ಮಾಡಿದ್ದರು. ಇದೀಗ ಕಳೆದ ಒಂದು ವಾರದಿಂದ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶೇ.20ರಷ್ಟು ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸರಾಸರಿ ಶೇ.80ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಇದೇ ರೀತಿ ಮಳೆ ಸುರಿದರೆ ಬಂಪರ್ ಬೆಳೆ ಬರುವ ನೀರಿಕ್ಷೆಯಲ್ಲಿ ರೈತರು ಇದ್ದಾರೆ. ಜಿಲ್ಲೆಯಲ್ಲಿ 1.76 ಲಕ್ಷ ಸಣ್ಣ ರೈತರು, 73 ಸಾವಿರ ದೊಡ್ಡ ರೈತರು ಇದ್ದಾರೆ. ಒಟ್ಟಾರೆ 3.6 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 1.5 ಲಕ್ಷದಿಂದ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಕಾರ್ಯ ನಡೆದಿದೆ.