ಬೀದರ: ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ನಗರದಲ್ಲಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿದರು. ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಕಪ್ಪು ಬಟ್ಟೆ ಧರಿಸಿ ಭಾಗವಹಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ಮಹಿಳೆಯರು, ವೃದ್ಧರು ‘ಆಲಿ ದೂಲಾ’ ಎಂದು ಕೂಗುತ್ತ ದೇಹದಂಡನೆ ಮಾಡಿಕೊಂಡರು. ದಾರಕ್ಕೆ ಕಟ್ಟಿದ ಬ್ಲೇಡ್‌ಗಳ ಗೊಂಚಲನ್ನು ಎದೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಎದೆಗೆ ಕೈಗೆಗಳಿಗೆ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿ ಮಹೋರಂ ಆಚರಣೆ ಮಾಡಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಗ ಇಮಾಮಿ ಹುಸೇನ್ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದಿರುವ ಪ್ರತೀಕವಾಗಿ ಈ ಆಚರಣೆ ಮಾಡಲಾಗುತ್ತದೆ ಎಂಬುದು ಸಮುದಾಯದ ಜನರ ಮಾತು. ಸಾವಿನ ಸ್ಮರಣಾರ್ಥ ಶೋಕಾಚರಣೆ ಮಾಡಿ ದೇವರನ್ನು ಸ್ಮರಿಸುವ ಕಾರ್ಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.
ವಿವಿಧೆಡೆ ಮೊಹರಂ: ಜಿಲ್ಲೆಯ ವಿವಿಧೆಡೆ ಮಂಗಳವಾರ ಮೊಹರಂ ಆಚರಣೆ ಮಾಡಲಾಯಿತು. ಹಿಂದೂ ಮುಸ್ಲಿಂ ಸಮುದಾಯದ ಜನರು ಸೇರಿ ಹಬ್ಬ ಆಚರಣೆ ಮಾಡಿರುವುದು ವಿಶೇಷವಾಗಿತ್ತು. ಬಾವಗಿ ಗ್ರಾಮದಲ್ಲಿ ಕೂಡ ಮೊಹರಂ ಆಚರಣೆ ನಿಮಿತ್ಯ ಪೀರ್‌ಗಳ ಮೆರವಣಿಗೆ ನಡೆಯಿತು.
ಮಂಗಳವಾರ ಬೆಳಗಿನ ಜಾವ ಗುರು ಭದ್ರೇಶ್ವರ ದೇವಸ್ಥಾನದ ಮಠದಲ್ಲಿ ಪೀರ್ ದೇವರ ಪಂಜಾಗಳಿಗೆ ವಿಶೇಷ ಪೂಜೆ ನೇರೆವರಿಸಿದ ನಂತರ ಮೆರವಣಿಗೆ ನಡೆಯಿತು. ಮರವಣಿಗೆಯಲ್ಲಿ ಯುವಕರ ಹುಲಿ ಕುಣಿತ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಭದ್ರೇಶ್ವರ ಮಠದ ಶಿವುಕುಮಾರ ಸ್ವಾಮಿ, ಶರಣಪ್ಪ ತಾಜುದ್ದೀನ್, ನಾಸೀರ್, ಮುಕ್ತರ್, ಇಸಾಕ್, ರಶೀದ್ ಆನಂದ ಸ್ವಾಮಿ, ಪ್ರಭು, ರಾಜಕುಮಾರ್ ಪಾಟೀಲ ಸೇರಿದಂತೆ ಅನೇಕರು ಇದ್ದರು.