Advertisement

ಚವ್ಹಾಣ ಮುಂದಿದೆ ಕಠಿಣ ಸವಾಲು

10:46 AM Aug 26, 2019 | Team Udayavani |

ದುರ್ಯೋಧನ ಹೂಗಾರ
ಬೀದರ:
ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ಬೀದರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಅನೇಕ ಬಾರಿ ಅಧಿಕಾರಿಗಳು, ಸಾರ್ವಜನಿಕರ ಗಮನ ಸೆಳೆದ ಔರಾದ ಶಾಸಕ ಪ್ರಭು ಚವ್ಹಾಣ ಇದೀಗ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದು, ಜಿಲ್ಲೆಗೆ ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಾರೆಯೇ ಎಂದು ಕಾಯ್ದು ನೋಡಬೇಕಿದೆ.

Advertisement

ನಿರಂತರ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಭು ಚವ್ಹಾಣ ಹಲವಾರು ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದರು. ಅಲ್ಲದೇ, ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಸಭೆಯಲ್ಲಿ ಗಮನ ಸೆಳೆಯುತ್ತಿದ್ದರು. ಇದೀಗ ಪ್ರಭು ಚವ್ಹಾಣ ಅವರೇ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಜಿಲ್ಲಾಡಳಿತವನ್ನು ಹೇಗೆ ನಿಭಾಯಿಸುತ್ತಾರೆ? ಜಿಲ್ಲೆಯ ಅಭಿವೃದ್ಧಿ ಜತೆಗೆ ಹಿಂದುಳಿದ ಸ್ವಕ್ಷೇತ್ರ ಔರಾದ ಚಿತ್ರಣ ಬದಲಿಸುತ್ತಾರಾ? ಎನ್ನುವ ನಿರೀಕ್ಷೆಯಲ್ಲಿದ್ದಾರೆ ಜನತೆ.

ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಳೆದ ಬೇಸಿಗೆಯಲ್ಲಿ ಔರಾದ ತಾಲೂಕು ಅತಿ ಹೆಚ್ಚು ನೀರಿನ ಅಭಾವ ಎದುರಿಸಿತ್ತು. ಸದ್ಯ ಮಳೆಗಾಲ ಆರಂಭವಾದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಔರಾದ ತಾಲೂಕಿನ ಅನೇಕ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಶಿಕ್ಷಣದಲ್ಲೂ ತೀರಾ ಹಿಂದಿದೆ. ಹೀಗಾಗಿ, ವಲಸೆ ಎನ್ನುವುದು ಈ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಕುಡಿಯುವ ನೀರಿನ ಬವಣೆಗೆ ಶಾಶ್ವತ ಕಾಯಕಲ್ಪ ಕಲ್ಪಿಸುವುದಲ್ಲದೇ ನೀರಾವರಿ ಯೋಜನೆಗಳಿಗೂ ಒತ್ತು ನೀಡಿ ಬರ ಮುಕ್ತ ತಾಲೂಕು, ಬರ ಮುಕ್ತ ಜಿಲ್ಲೆ ಮಾಡುವ ಕಾರ್ಯವನ್ನು ಸಚಿವ ಪ್ರಭುವ ಚವ್ಹಾಣ ಮಾಡಬೇಕಿದ್ದು, ಈ ಮೂಲಕ ರೈತರಿಗೆ ಆರ್ಥಿಕವಾಗಿ ಚೈತನ್ಯ ತುಂಬಬೇಕಿದೆ.

ಕಳೆದ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಸಚಿವರು ತಮ್ಮ ಸ್ವಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಕಾಳಜಿ ವಹಿಸಿದರು ಎನ್ನುವ ಆರೋಪಗಳು ಕೇಳಿಬಂದಿದ್ದವು. ಯಾವ ಸಚಿವರೂ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿಲ್ಲ ಎನ್ನುವ ಆರೋಪಗಳು ಇದ್ದವು. ಇದೀಗ ಹಿಂದುಳಿದ ಪ್ರದೇಶದ ಶಾಸಕ ಚವ್ಹಾಣ ಸಚಿವರಾಗಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾರೋ ಅಥವಾ ಅವರ ಸ್ವಕ್ಷೇತ್ರಕ್ಕೆ ಮಾತ್ರ ಮೀಸಲಾಗುತ್ತಾರಾ ಎಂದು ಕಾಯ್ದು ನೋಡಬೇಕಿದೆ.

Advertisement

ಶಾಶ್ವತ ಕುಡಿಯುವ ನೀರು: ಜಿಲ್ಲೆಯ ಬೀದರ, ಹುಮನಾಬಾದ, ಭಾಲ್ಕಿ, ಚಿಟಗುಪ್ಪ ತಾಲೂಕುಗಳಿಗೆ ಕಾರಂಜಾ ಜಲಾಶಯವೇ ಕುಡಿಯುವ ನೀರಿನ ಮೂಲವಾಗಿದೆ. ಕಳೆದ ಎರಡು ವರ್ಷ ಹಾಗೂ ಪ್ರಸ್ತಕ ವರ್ಷದಲ್ಲಿ ಮಳೆ ಕೊರತೆ ಎದುರಾಗಿದ್ದು, ಕಾರಂಜಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ವರ್ಷ ಕೇವಲ 0.143 ಟಿಎಂಸಿ ಅಡಿ ನೀರು ಒಳ ಹರಿವು ಬಂದಿದ್ದು, 0.902 ಟಿಎಂಸಿ ಅಡಿ ನೀರು ಬಳಕೆಗೆ ಯೋಗ್ಯವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಚಳಿಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ನೂತನ ಸಚಿವರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಮಹತ್ವ ನೀಡುವ ಕೆಲಸ ಆಗಬೇಕಿದೆ.

ನುಡಿದಂತೆ ನಡೆಯುವರೇ ಬಿಎಸ್‌ವೈ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲದ ಸುಳಿಯಲ್ಲಿ ನರಳುತ್ತಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಬೆಂಬಲ ನೀಡುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರು. ಕಳೆದ ವರ್ಷ ಮೈತ್ರಿ ಸರ್ಕಾರದ ಅವಧಿಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕಬ್ಬು ನುರಿಸುವ ಕೆಲಸ ಆರಂಭಿಸಲಾಗಿತ್ತು. ಇದೀಗ ಮತ್ತೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ವರ್ಷದಿಂದ ಸಂಬಳ ಬಾಕಿ ಉಳಿದುಕೊಂಡಿದ್ದು, ಮೊದಲು ಸಂಬಳ ನೀಡಿ ಕಾರ್ಖಾನೆ ಶುರು ಮಾಡಿ ಎಂದು ಕಾರ್ಖಾನೆ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ನೂತನ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ತರುವ ಮೂಲಕ ಈ ವರ್ಷ ಸುಸೂತ್ರವಾಗಿ ಬಿಎಸ್‌ಎಸ್‌ಕೆ ಕಾರ್ಖಾನೆ ನಡೆಯುವಂತೆ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next