Advertisement

ಪರಿಹಾರ ಕೊಡಿ ಇಲ್ಲ ರಾಜೀನಾಮೆ ನೀಡಿ

10:09 AM Jun 19, 2019 | Naveen |

ಬೀದರ: ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಿ, ಪರಿಹಾರ ಕಲ್ಪಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗವಹಿಸಿ, ಮುಂದೆ ನಾವೇ ಮತ್ತೇ ನಿಮ್ಮನ್ನೇ ಗೆಲ್ಲಿಸುತ್ತೇವೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಎದುರು ಹೀಗೆ ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

ಕಾರಂಜಾ ಯೋಜನೆಗೆ ಸಂತ್ರಸ್ತರ ಭೂಮಿಯನ್ನು ಸರ್ಕಾರ ಒತ್ತಾಯಪೂರ್ವಕ ಪಡೆದುಕೊಂಡಿದೆ. ಈ ಕುರಿತು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಜಿಲ್ಲೆಯ ಸಚಿವರು ಹೆಚ್ಚು ಗಮನ ಹರಿಸುತ್ತಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಲು ಆಗುತ್ತದೆಯೋ, ಇಲ್ಲವೋ ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು. ಪದೇ ಪದೇ ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ ಎಂದು ಕಿಡಿ ಕಾರಿದರು.

ಕಾರಂಜಾ ಸಂತ್ರಸ್ತರೊಬ್ಬರು ನ್ಯಾಯಾಲಯ ಮೊರೆ ಹೋಗಿ ಸೂಕ್ತ ಪರಿಹಾರ ಪಡೆದಿದ್ದಾರೆ. ಆದರೆ, ಎಲ್ಲಾ ರೈತರು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಬಡತನದಿಂದ ಬಳಲುತ್ತಿರುವ ರೈತರು ವಕೀಲರ ಫೀ ಕಟ್ಟಲು ಕೂಡ ಆಗದ ಸ್ಥಿತಿ ಇದ್ದು, ಈಗಾಗಲೇ ನ್ಯಾಯಾಲಯದಿಂದ ಬಂದ ಆದೇಶದಂತೆ ಎಲ್ಲಾ ರೈತರಿಗೆ ಪರಿಹಾರ ಕಲ್ಪಿಸಬೇಕೆಂದು ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಒತ್ತಾಯಿಸಿದರು.

ರಹೀಂ ಖಾನ್‌ ವಿರುದ್ಧ ಕಿಡಿ: ಕಾರಂಜಾ ನೀರು ಪಡೆದುಕೊಂಡು ಸಚಿವ ರಹೀಂ ಖಾನ್‌ ಉಚಿತ ನೀರೆಂದು ಬರೆಸಿಕೊಂಡು ತಮ್ಮ ಭಾವಚಿತ್ರ ಹಾಕಿಕೊಂಡು, ಸರ್ಕಾರದಿಂದ ನೀರು ಪೂರೈಕೆಯ ಬಿಲ್ ಪಡೆಯುತ್ತಿದ್ದಾರೆಂದು ಸಚಿವ ರಹೀಂ ಖಾನ್‌ ಎದುರೇ ರೈತ ರಾಜಕುಮಾರ ಹಳ್ಳಿಖೇಡ್‌ ಆರೋಪಿಸಿದರು. ಕಾರಂಜಾ ನೀರು ಬಳಸುವ ಸಚಿವರು ಕಾರಂಜಾ ಸಂತ್ರಸ್ತರ ಬಗ್ಗೆ ಕಾಳಜಿ ವಹಿಸಬೇಕು, ಚಿಂತಿಸಬೇಕು ಎಂದು ಒತ್ತಾಯಿಸಿದರು.

Advertisement

ನೀರು ಹರಿಯದ ಕಾಲುವೆಗೆ ಹಣ: ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಆದರೆ, ನೀರು ಹರಿಯದ ಕಾಲುವೆಗಳ ಆಧುನೀಕರಣಕ್ಕೆ ನೂರಾರು ಕೋಟಿ ಹಣ ಖರ್ಚು ಮಾಡುತ್ತಿದೆ ಎಂದು ರೈತರು ಹಾಗೂ ಸಂಸದ ಭಗವಂತ ಖೂಬಾ ಆರೋಪಿಸಿದರು. ಈ ಹಿಂದೆ 540 ಕೋಟಿ ವೆಚ್ಚದಲ್ಲಿ ಕಾಲುವೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಇದೀಗ ಮತ್ತೆ 619 ಕೋಟಿ ರೂ.ಗಳ ಕಾಲುವೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಒಂದೇ ಕಾಲುವೆಗೆ ಎರಡು ಬಾರಿ ನೂರಾರು ಕೋಟಿ ಯಾವ ಲೆಕ್ಕದಲ್ಲಿ ಖರ್ಚು ಮಾಡಲಾಗುತ್ತಿದೆ. ಆ ಕಾಲುವೆಗಳಲ್ಲಿ ಯಾವತ್ತಾದರೂ ನೀರು ಹರಿದಿದೆಯಾ? ಎಂದು ಪ್ರಶ್ನಿಸಿದ ಸಂಸದ ಖೂಬಾ, ಹನಿ ನೀರೂ ಹರಿಯದ ಕಡೆ ನೂರಾರು ಕೋಟಿ ಯಾಕೆ ಖರ್ಚುಮಾಡುತ್ತೀರಿ? ಬದಲಿಗೆ ರೈತರಿಗೆ ಪರಿಹಾರ ನೀಡಲು ಕಾನೂನು ಮಾಡಬಹುದಿತ್ತಲ್ವ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕಣ್ಣೀರೊರೆಸುವ ಕೆಲಸ ಬೇಡ: ಜಿಲ್ಲೆಗೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರಂಜಾ ಸಂತ್ರಸ್ತರ ಸಭೆ ಕರೆದು ಮಾತನಾಡಿದರೆ ಸಾಲದು. ಬದಲಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಬಂದ ಸಂದರ್ಭದಲ್ಲಿ ಸಂತ್ರಸ್ತರು ಪ್ರತಿಭಟನೆ ಹೋರಾಟ ನಡೆಸುತ್ತಾರೆಂಬುದನ್ನು ತಿಳಿದು ಸಭೆ ಕರೆದು ಕಣ್ಣೀರೊರೆಸುವ ಕೆಲಸ ಮಾಡಬಾರದು. ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಮುನ್ನ ಉನ್ನತ ಸಮಿತಿ ರಚಿಸಿ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಬೇಕೆಂದು ಸಂಸದ ಖೂಬಾ ಹಾಗೂ ಸಂತ್ರಸ್ತ ರೈತರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next