ಬೀದರ: ಜಿಲ್ಲೆಯಲ್ಲಿ 38 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅಧಿಕಾರಿಗಳು ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸಬೇಕಿದೆ.
ಸದ್ಯ ಜಿಲ್ಲೆಯಲ್ಲಿ ತೀರಾ ತೂಕ ಕಡಿಮೆ ಹೊಂದಿದ 54 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಯಾವ ಕಾರಣಕ್ಕೆ ಜಿಲ್ಲೆಯ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ನಿವಾರಣೆಗೆ ಮುಂದಾಗಬೇಕಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪ್ರೋಟಿನ್ ಹಾಗೂ ನ್ಯೂಟ್ರಿಮಿಕ್ಸ್ ಆಹಾರ ವಿತರಿಸಲಾಗುತ್ತಿದೆ. ಆದರೆ, ವಿತರಿಸುತ್ತಿರುವ ಆಹಾರ ಪದಾರ್ಥಗಳನ್ನು ಎಷ್ಟು ಮಕ್ಕಳು ಸೇವಿಸುತ್ತಿದ್ದಾರೆ. ಸೇವಿಸಿದರೂ ಅಪೌಷ್ಟಿಕತೆ ಎದುರಾಗುವುದು ಯಾಕೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಅಲ್ಲದೆ, ಆಯಾ ತಾಲೂಕುಗಳಲ್ಲಿ ವಿತರಿಸುತ್ತಿರುವ ಆಹಾರ ಪ್ಯಾಕ್‌ಗಳ ಗುಣಮಟ್ಟ ಪರಿಶೀಲನೆ ನಡೆಸಬೇಕಿದೆ. ನಿಗದಿತ ಪ್ರಮಾಣದ ಪ್ರೋಟಿನ್, ವಿಟಾಮಿನ್, ಕ್ಯಾಲೋರಿ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯ ಅಧಿಕಾರಿಗಳ ತಂಡ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಯಾವ ಕಾರಣಕ್ಕೆ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಿದ್ದಾರೆ. ಯಾವ ಕೊರತೆಗಳು ಮಕ್ಕಳನ್ನು ಕಾಡುತ್ತಿದೆ ಎಂಬುದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
ಸದ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಕಳೆದ ಕೆಲ ತಿಂಗಳಿಂದ ಅಂಗನವಾಡಿ ಕೇಂದ್ರಗಳ ಆಹಾರ ಪದಾರ್ಥಗಳ ಗುಣಮಟ್ಟ ಣಕುರಿತು ಸರ್ಕಾರಿ ಆಹಾರ ತಪಾಸಣೆ ಕೇಂದ್ರಕ್ಕೆ ಮಾದರಿ ಕಳುಹಿಸಿದ್ದಾರೆ.
ಜಿಲ್ಲೆಯಲ್ಲಿನ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಇಲಾಖೆ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಯಾವ ಕಾರಣಕ್ಕೆ ಅಪೌಷ್ಟಿಕತೆ ಕಂಡು ಬರುತ್ತಿದೆ ಎಂಬುದನ್ನು ತಿಳಿಯುವ ಕಾರ್ಯ ಮಾಡಲಾಗುತ್ತಿದೆ.
•
ಮಂಜುನಾಥ, ಡಿ.ಡಿ.,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಪ್ರತಿವರ್ಷ ಜಿಲ್ಲೆಯ ಎಲ್ಲಾ ಎಂಎಸ್‌ಪಿಟಿಸಿ ಕೇಂದ್ರಗಳ ಆಹಾರ ತಪಾಸಿಸಲಾಗುತ್ತಿದೆ. ಮಕ್ಕಳ ಅಪೌಷ್ಟಿಕತೆಗೆ ಅನೇಕ ಕಾರಣಗಳು ಇರುತ್ತವೆ. ಯಾವ ಕಾರಣಕ್ಕೆ ಮಕ್ಕಳಿಗೆ ಸಮಸ್ಯೆ ಇದೆ ಎಂದು ತಿಳಿದು ಅಂತಹ ಆಹಾರ ಪದಾರ್ಥಗಳ ವಿತರಣೆಗೆ ಮುಂದಾಗುವ ಕೆಲಸವಾಗಬೇಕು. ಇದೀಗ ಆಹಾರ ಪದಾರ್ಥ ಬೇರೆಕಡೆಗೆ ಪರಿಶೀಲನೆಗೆ ಕಳುಹಿಸಲಾಗುತ್ತಿದೆ.
•
ಡಾ|ಶಿವಶಂಕರ,
ಆಹಾರ ಸುರಕ್ಷತಾ ಅಧಿಕಾರಿಗಳು
ದುರ್ಯೋಧನ ಹೂಗಾರ