Advertisement

ಮಡಿವಾಳೇಶ್ವರ ಮಂದಿರ ಅಭಿವೃದ್ಧಿಗೆ ಬದ್ಧ

05:09 PM Sep 16, 2019 | Naveen |

ಬೀದರ: ಶುಕ್ಲತೀರ್ಥ ಝರಿ ಸೇರಿದಂತೆ ಇಲ್ಲಿಯ ಮಡಿವಾಳೇಶ್ವರ ಮಂದಿರದ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹೇಳಿದರು.

Advertisement

ನಗರದ ನಾವದಗೇರಿ ಹೊರವಲಯದಲ್ಲಿರುವ ಸುಪ್ರಸಿದ್ಧ ಮಡಿವಾಳೇಶ್ವರ ಮಂದಿರದಲ್ಲಿ ನಡೆದ ‘ನಮ್ಮೂರು ನಾವದಗೇರಿ ಜಾನಪದ ಜಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದರ ಜಿಲ್ಲೆಯು ಜಾನಪದದ ತವರೂರು. ಝರಿಗಳ ಬೀಡು. ಇಲ್ಲಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಕ್ಕೆ 5 ಎಕರೆ ಹಾಗೂ ಜಾನಪದ ಭವನ ನಿರ್ಮಾಣಕ್ಕೆ 2 ಗುಂಟೆ ಜಮಿನು ಮಂಜೂರು ಮಾಡಲಾಗಿದೆ. ದೇವರು, ಸಾಧು, ಸಂತರು ಇರುವ ಕಡೆ ಮನುಷ್ಯನ ವಾಸ ಇದ್ದರೆ ಅಲ್ಲಿಯ ಪರಿಸರ ಆರೋಗ್ಯಮಯವಾಗಿರುತ್ತದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಮಠ, ಮಂದಿರಗಳು ಇದ್ದ ಕಡೆ ಸುಖ, ಶಾಂತಿ ನೆಲೆಸಿರುತ್ತದೆ. ಅದು ಮನುಷ್ಯನಿಗೆ ವಾಮ ಮಾರ್ಗಕ್ಕೆ ಜಾರದಂತೆ ರಕ್ಷಿಸುತ್ತದೆ. ಭಾವೈಕ್ಯತೆ ಹಾಗೂ ಸೌಹಾರ್ದ ವಾತಾವರಣ ಸೃಷ್ಟಿಯಾಗಲು ಅನುವು ನೀಡುತ್ತದೆ ಎಂದರು.

ಸಾಹಿತಿ ಎಸ್‌.ಎಂ. ಜನವಾಡಕರ್‌ ಮಾತನಾಡಿ, ಜಗತ್ತು ಹುಟ್ಟಿದಾಗಲೇ ಜನಪದ ಉದಯಿಸಿತು. ಜನಪದ ಇದ್ದರೆ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಯೂರುತ್ತದೆ. ಮನುಷ್ಯನ 16 ಸಂಸ್ಕಾರಗಳು ಆತನನ್ನು ಸುಸಂಸ್ಕೃತನನ್ನಾಗಿ ಮಾಡುತ್ತವೆ. ಜಾನಪದ ಉಡಿಗೆ, ತೊಡುಗೆ, ಆಹಾರ ಪದ್ಧತಿಗಳು ಬಲಿಷ್ಟ ಮಾನವ ಸಂಪತ್ತು ಹುಟ್ಟು ಹಾಕುತ್ತವೆ ಎಂದರು. ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಶುಕ್ಲಮುನಿ ಎಂಬ ಋಷಿ ಇಲ್ಲಿ ತಪಸ್ಸು ಮಾಡಿದ ತಾಣ, ಮಡಿವಾಳೇಶ್ವರರು ಬಿಡಾರ ಹೂಡಿ ಬಾಳಿ ಬದುಕಿದ ಪುಣ್ಯ ಕ್ಷೇತ್ರವಿದು. ಬರಗಾಲದಲ್ಲೂ ಬತ್ತದೇ ಇಡೀ ನಗರಕ್ಕೆ ನೀರುಣಿಸಿದ ಪವಿತ್ರ ಝರಿ ಇದಾಗಿದ್ದು, ಇದರ ಜೀರ್ಣೋದ್ಧಾರ ಅಗತ್ಯವಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರಾಗಿ ಬಂದ ಸಿದ್ದಗೊಂಡ ಚಿಟಗೊಂಡ್‌, ಜೆಸ್ಕಾಂ ಕಿರಿಯ ಇಂಜಿನಿಯರ್‌ ಶಿವಾನಂದ ಧನಗರ್‌, ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಕಿರಣ ಪಾಟೀಲ, ಸಚೀನ್‌ ಸಿರಗೆರೆ, ಸಂತೋಷ ಧನಗರ್‌, ವೈಷ್ಣವಿ ಗುನ್ನಳ್ಳಿಕರ್‌, ಪಶು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ವಿಶಾಲ ಹೆಬ್ಟಾಳೆ ಅವರನ್ನು ಸನ್ಮಾನಿಸಲಾಯಿತು. ಪುಂಡ್ಲಿಕರಾವ್‌ ಪಾಟೀಲ ಗುಮ್ಮಾ, ಸಂಜೀವಕುಮಾರ ಸ್ವಾಮಿ ಉಜನಿ, ಎಸ್‌.ಬಿ. ಕುಚಬಾಳ, ಲಕ್ಷ್ಮಣರಾವ್‌ ಕಾಂಚೆ, ಕಮಳಮ್ಮ ಸಂತಪುರೆ, ರಘುನಾಥರಾವ್‌ ಪಾಂಚಾಳ, ಇಮಾಮಸಾಬ್‌ ವಲ್ಲೆಪ್ಪನೋರ್‌ ಅವರಿಂದ ಜಾನಪದ ಕಲಾ ಪ್ರದರ್ಶನ ಜರುಗಿತು.

ಜಾನಪದ ವಿದ್ವಾಂಸ ಶಂಭುಲಿಂಗ ವಾಲ್ದೊಡ್ಡಿ ಜಾನಪದ ಗೀತೆ ಹಾಡಿದರು. ಬರ್ದಿಪೂರ ಆಶ್ರಮದ ಡಾ| ಸಿದ್ದೇವರ ಮಹಾಸ್ವಾಮೀಜಿ ಹಾಗೂ ಚಾಂಬೋಳ ಶ್ರೀಮಠದ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಶ್ರೀ ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಓಂಪ್ರಕಾಶ ಬಜಾರೆ, ಶುಕ್ಲತೀರ್ಥ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕಾಮಣ್ಣ, ಉಪಾಧ್ಯಕ್ಷ ಶಿವರಾಜ ಬೆಣಕನಳ್ಳಿಕರ್‌, ಬಡಾವಣೆ ಪ್ರಮುಖರಾದ ರಾಜು ಜಮಾದಾರ, ಅನೀಲ ಸುತಾರ್‌, ಸಂಗಮೇಶ ಬೀಕ್ಲೆ, ನಾಗನಾಥ ಮಾನೆ, ಗುಣವಂತ ಪಾಟೀಲ, ಶಿವಕುಮಾರ ದಾನಾ, ಮಡಿವಾಳಯ್ಯ ಸ್ವಾಮಿ ಇದ್ದರು. ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಹಾಗೂ ತಾಲೂಕು ಘಟಕಗಳು, ಶ್ರೀ ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌ ಬಾವದಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next