Advertisement
ಲೋಕಸಭೆ ಚುನಾವಣೆಯಲ್ಲಿ ಸಧ್ಯ ಕಾಂಗ್ರೆಸ್-ಬಿಜೆಪಿ ಮಧ್ಯೆ ಭಾರಿಪೈಪೋಟಿ ನಡೆಯುತ್ತಿದೆ. ಈ ಮಧ್ಯದಲ್ಲಿ ಜಿಲ್ಲಾ ಪಂಚಾಯತ ಚುನಾವಣೆಯ ಘಟನೆ ಬಿಜೆಪಿಗೆ ನುಂಗಲಾರದ ತುತ್ತಾಗಿ
ಪರಿಣಮಿಸಿದೆ. ಮುಖಂಡರಿಗೆ ಭಾರಿ ಮುಜುಗರ ಎದುರಿಸುವಂತೆ ಮಾಡಿದೆ. ಈ ಕುರಿತು ಉತ್ತರಿಸಲಾಗದ ಬಿಜೆಪಿ ಮುಖಂಡರು ಇಕ್ಕಟಿಗೆ ಸಿಲುಕಿದ್ದಾರೆ.
ಜಗದೀಶ ಶೆಟ್ಟರ್ ಕೂಡ ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಅಂದು
ನಡೆದ ಸುದ್ದಿಗೋಷ್ಠಿಯಲ್ಲಿ ಇಂತಹ ಘಟನೆಗಳು ಕೆಲ ಕಡೆಗಳಲ್ಲಿ ನಡೆಯುತ್ತಿವೆ. ಸ್ಥಳೀಯಾವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಪಕ್ಷದ ಮುಖಂಡರು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸದಸ್ಯರಿಗೆ ನೋಟಿಸ್ ಜಾರಿ: ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಭಾಗವಹಿಸಿದ್ದ ಒಟ್ಟು 11 ಸದಸ್ಯರ ಪೈಕಿ
10 ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಅವರ ತಾಯಿ ಶಕುಂತಲಾ ಬೆಲ್ದಾಳೆ ಅವರಿಗೆ ನೋಟಿಸ್ ಜಾರಿ ಮಾಡಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಇತರೆ ಜಿಲ್ಲಾ ಪಂಚಾಯತ ಸದಸ್ಯರು ಕೇಳುತ್ತಿದ್ದಾರೆ. ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮ ಪಕ್ಷದ
ಅಭ್ಯರ್ಥಿ ಸ್ಪರ್ಧೆ ನಡೆಸಿದರೆ ಅವರ ಪರ ಮತ ಚಲಾಯಿಸಬೇಕು. ಪಕ್ಷದ ಪರ ಮತ ಚಲಾವಣೆ ಮಾಡದೆ ತಟಸ್ಥವಾಗಿ ಉಳಿದುಕೊಂಡರೂ ಕೂಡ ಅದು ಪಕ್ಷ ವಿರೋಧಿ ಯಾಗುತ್ತದೆ ಈ ಹಿನ್ನೆಲೆಯಲ್ಲಿ ಶಕುಂತಲಾ ಬೆಲ್ದಾಳೆ ಅವರಿಗೆ ಯಾಕೆ ನೋಟಿಸ್ ಜಾರಿ ಮಾಡಿಲ್ಲ ಎಂದು ಬಿಜೆಪಿ ಜಿಪಂ ಸದಸ್ಯರು ಪ್ರಶ್ನಿಸುತ್ತಿದ್ದಾರೆ.
Related Articles
ಬಹಿರಂಗ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಬಿಜೆಪಿ ಮುಖಂಡರಿಗೆ ಛೀಮಾರಿ ಹಾಕುತ್ತಿದ್ದಾರೆ. ಜಿಲ್ಲಾ ಪಂಚಾಯತ ಘಟನೆ ಕುರಿತು ಪ್ರಶ್ನಿಸುತ್ತಿರುವ ಜನರು, ಬಿಜೆಪಿ ನಂಬಿ
ಜನರು ಮತ ನೀಡುತ್ತಿದ್ದಾರೆ. ಆದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸಾಥ್ ನೀಡುವುದಾದರೆ
ಬಿಜೆಪಿಗೆ ಯಾಕೆ ಬೆಂಬಲಿಸಬೇಕು ಎಂದು ಖಾರವಾಗಿಯೆ ಪ್ರಶ್ನೆಗಳ
ಸುರಿಮಳೆ ಸುರಿಸುತ್ತಿದ್ದಾರೆ. ಇದಕ್ಕೂ ಸೂಕ್ತ ಉತ್ತರ ನೀಡುವಲ್ಲಿ ಮುಖಂಡರು ವಿಫಲರಾಗುತ್ತಿದ್ದಾರೆ.
Advertisement
ಚುನಾವಣೆ ನಂತರ ಕ್ರಮ: ಲೋಕಸಭೆ ಚುನಾವಣೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದೆಂದು ಬಿಜೆಪಿ ಮುಖಂಡರು ಮೌನ ವಹಿಸಿದ್ದಾರೆ ಎನ್ನಲಾಗಿದೆ. ಚುನಾವಣೆಯ ನಂತರ ಈ ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದ್ದಾರೆ. ಸಧ್ಯ ಯಾವುದೇ ನಿರ್ಧಾರ ತೆಗೆದುಕೊಂಡರೂ ಕೂಡ ಪಕ್ಷಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇರುವುದನ್ನು ಅರಿತು ಮುಖಂಡರು ಈ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ಕಲ್ಪಿಸಬಾರದು ಎಂದು ಪಕ್ಷದಲ್ಲಿ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ಸೂಚಿಸಲಾಗಿತ್ತು. ಆದರೆ, ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ, ನಾಲ್ವರು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆರು ಜನರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿದ್ದಾರೆ. ಈ ಕುರಿತು ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಸದಸ್ಯರಿಂದ ಸೂಕ್ತ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಜೈಕುಮಾರ ಕಾಂಗೆ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಯೋಧನ ಹೂಗಾರ