Advertisement

ಕವಿತೆ ರಚನೆಗೆ ಅಧ್ಯಯನ ಅವಶ್ಯ

06:12 PM Oct 23, 2019 | Naveen |

ಬೀದರ: ಕವಿಯಾದವನು ಸಮಾಜದ ತಪ್ಪುಗಳನ್ನು ತಿದ್ದುವ ವಿರೋಧ ಪಕ್ಷದ ನಾಯಕನಂತೆ ಕೆಲಸ ಮಾಡುತ್ತಾನೆ. ವಿದ್ಯಾರ್ಥಿಗಳು ಯಾವಾಗಲೂ ಓದುವ ಮತ್ತು ಏನಾದರೂ ಹೊಸದನ್ನು ಬರೆಯುವ ಗೀಳು ಹಚ್ಚಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ|ಜಗನ್ನಾಥ ಹೆಬ್ಟಾಳೆ ಸಲಹೆ ನೀಡಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮ ಹಾಗೂ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿತೆಗಳನ್ನು ರಚನೆ ಮಾಡುವ ಸಾಹಿತಿಗಳಿಗೆ ನಿರಂತರ ಅಧ್ಯಯನ ಅವಶ್ಯಕ. ಒಬ್ಬ ಅಭಿಯಂತರ ಇಟ್ಟಿಗೆ, ಸಿಮೆಂಟ್‌ ಮತ್ತು ಕಾಂಕ್ರಿಟ್‌ನ್ನು ಸರಿಯಾಗಿ ಜೋಡಿಸಿ ಒಂದು ಸುಂದರವಾದ ಕಟ್ಟಡ ತಯಾರಿಸಿದಂತೆ ಕವಿಯಾದವನು ಶಬ್ದಗಳ ಸಂಪತ್ತು,
ಅಕ್ಷರಗಳ ಜೋಡಣೆಯ ಮುಖಾಂತರ ಕವಿತೆ ಬರೆದಾಗ ಮಾತ್ರ ಸಮೃದ್ಧವಾದ ಕವಿತೆ ಹೊರಬರುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ| ಕಲ್ಪನಾ ದೇಶಪಾಂಡೆ ಮಾತನಾಡಿ, ತಪ್ಪಾಗುತ್ತೆ ಎಂದು ಕವಿತೆ ರಚನೆ ಮಾಡುವುದನ್ನು ನಿಲ್ಲಿಸಬಾರದು. ಎಡವಿ ಎಡವಿ ನಡೆಯಲು ಕಲಿತಂತೆ ತಪ್ಪುಗಳನ್ನು ತಿದ್ದಿಕೊಂಡು ಕವಿತೆ ರಚನೆ ಮಾಡಬೇಕು. ಅಂತಹ ಕವಿತೆಯೇ ಸಮಾಜದಲ್ಲಿ ಶ್ರೇಷ್ಠತೆ ಪಡೆದುಕೊಳ್ಳುತ್ತದೆ. ಕವಿ ರಚಿಸಿದ ಕವಿತೆ ಸಮಾಜವನ್ನು ಒಡೆಯುವಂತೆ ಇರದೇ ಸಮಾಜದ ಓರೆಕೋರೆಗಳನ್ನು ತಿದ್ದುವಂತಿರಬೇಕು ಎಂದು ಕರೆ ನೀಡಿದರು. ಪ್ರಾಧ್ಯಾಪಕ ಡಾ| ಮಹಾನಂದ ಮಡಕಿ ಮಾತನಾಡಿ, ಕಾವ್ಯ ಎಂಬುದು ಕೇವಲ ಶಬ್ದ ಮತ್ತು ಅಕ್ಷರಗಳ ಸಹಯೋಗವಲ್ಲ. ಬದಲಾಗಿ ಅದು ಭಾವನಾತ್ಮಕ ವಿಚಾರಗಳ ಸಂಗಮವಾಗಿದೆ. ಕವಿತೆ ರಚಿಸುವ ಕವಿಯು ಪ್ರಜಾಪತಿಯಾಗಿ ಆ ಕಾವ್ಯಕ್ಕೆ ಆತನೇ ಸೃಷ್ಟಿಕರ್ತನಾಗುತ್ತಾನೆ. ಕವಿಯಾದವನು ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಬದುಕಬೇಕು. ಕವಿ ಕೇವಲ ಪ್ರಚಾರಕ್ಕಾಗಿ ಕವಿತೆ ರಚಿಸದೆ ಸಮಾಜದ ಏಳ್ಗೆಗಾಗಿ ರಚಿಸಬೇಕು ಎಂದರು.

ಆಂಗ್ಲ ವಿಭಾಗದ ಮುಖ್ಯಸ್ಥೆ ಗೀತಾ ರಾಗಾ ಸ್ವಾಗತಿಸಿದರು. ಸಂಗೀತಾ ಮಾನಾ ನಿರೂಪಿಸಿದರು. ಪ್ರೊ|ಗೀತಾ ಪೋಸ್ತೆ ವಂದಿಸಿದರು. ಕವಿಗೋಷ್ಠಿಯಲ್ಲಿ ಪ್ರಮುಖರಾದ ಮಹಾರುದ್ರ ಡಾಕುಳಗೆ, ಡಾ|ಸುನೀತಾ ಕೂಡ್ಲಿಕರ್‌, ಗೀತಾ ಪೋಸ್ತೆ, ಡಾ| ಸುರೇಖಾ ಬಿರಾದಾರ, ರೂಪಾ ಗುಡ್ಡಾ, ಪವನಕುಮಾರ, ಪ್ರಾರ್ಥನಾ, ಓಂಕಾರ ಪಾಟೀಲ, ಜಯಪ್ರಕಾಶ, ಡೆಬೋರಾ, ಸುಪ್ರಿಯಾ, ಶೇರಿಲ್‌, ಶಿವರಾಣಿ, ಜೋಸ್ನಾ, ದಿಶಾನ್‌ ಮತ್ತು ಇಫ್ರಾ ಇನ್ನಿತರರು ಕವಿತೆ ವಾಚನ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕೇಂದ್ರ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಸ್ನಾತಕ್ಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next