ಬೀದರ: ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದಿಂದ ಔರಾದ ತಾಲೂಕಿನ ಎಕಲಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ನಡೆಯಿತು.
ಭಾಲ್ಕಿಯ ಆರೋಗ್ಯ ಮಾತಾ ಸೇವಾ ಕೇಂದ್ರದ ಶಂಕರರಾವ್ ಬಿರಾದಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಶಾಲಾ ಕಾಲೇಜುಗಳಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ನ.25ರಿಂದ ಡಿಸೆಂಬರ್ 10ರ ವರೆಗೆ ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ನಡೆಸಲಾಗುತ್ತಿದೆ. ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಮನೆಗೆ ಬಂದಲ್ಲಿ ಸಹಕರಿಸಬೇಕು ಎಂದರು.
ಸ್ಪರ್ಶಜ್ಞಾನವಿಲ್ಲದ, ತಿಳಿ ಬಿಳಿ, ತಾಮ್ರ ಬಣ್ಣದ ಮಚ್ಚೆಯೇ ಕುಷ್ಠ ರೋಗವಾಗಿರಬಹುದು. ಈ ರೋಗವನ್ನು 1873ರಲ್ಲಿ ನಾರ್ವೆ ದೇಶದ ವಿಜ್ಞಾನಿಯಾದ ಡಾ|ಹೆನ್ಸ್‌ನ್ ಪತ್ತೆಹಚ್ಚಿದ್ದಾರೆ. ಇದು ಮೈಕ್ರೋ ಬ್ಯಾಕ್ಟಿರಿಯ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತದೆ. ಇದಕ್ಕೆ ಹೆನ್ಸ್‌ನ್ ಡಿಸೀಜ್ ಎನ್ನುವ ಹೆಸರೂ ಇದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಗಾಳಿ ಮೂಲಕ ರೋಗಾಣುಗಳು ಮತ್ತೂಬ್ಬರ ಶರೀರ ಪ್ರವೇಶಿಸುತ್ತವೆ. ಈ ರೋಗವನ್ನು ಬೇರು ಸಹಿತ ಕಿತ್ತೂಗೆಯಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ತಾಲೂಕು ಕುಷ್ಠರೋಗ ಮೇಲ್ವಿಚಾರಕ ರಮೇಶ ಬಾಪುನಾಗೇಶ ಮಾತನಾಡಿ, ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಬಂಧಿ ಸಿದೆ. ದೇಹದ ಮೇಲೆ ಯಾವುದೇ ರೀತಿಯ ಮಚ್ಚೆಗಳು ಕಾಣಿಸಿದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಬಹುಔಷಧಿ ಚಿಕಿತ್ಸೆಯಿಂದ ಈ ರೋಗವನ್ನು ಗುಣ ಪಡಿಸಬಹುದಾಗಿದ್ದು, ಕುಷ್ಠರೋಗ ಹೊಂದಿರುವವರಿಗೆ ಚಿಕಿತ್ಸೆಗೆ ಸಹಾಯ ಮಾಡಬೇಕೆ ವಿನಃ ಅವರನ್ನು ಕೀಳಾಗಿ ನೋಡಬಾರದು ಎಂದು ಸಲಹೆ ನೀಡಿದರು. ಪ್ರೌಢಶಾಲೆ ಮುಖ್ಯಗುರು ಸೂರ್ಯಕಾಂತ ನಾಗೂರೆ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಬೀರಪ್ಪಾ ಕಡ್ಲಿಮಟ್ಟಿ ನಿರೂಪಿಸಿದರು. ಕ್ಷೆತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ವಂದಿಸಿದರು.