ಬೀದರ: ನಾಡು ಸುವ್ಯವಸ್ಥಿತವಾಗಿರಲು ವಿಶೇಷ ಕೊಡುಗೆ ನೀಡುವ ಕಾರ್ಮಿಕರ ಶ್ರಮವನ್ನು ಸಮಾಜ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ್ ಹೇಳಿದರು.
ನಗರದ ಸುಖೀ ಹಾಲ್ನಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕವಾಗಿ ಕೆಳ ಸ್ತರದಲ್ಲಿ ಗುರುತಿಸಿಕೊಳ್ಳುವ ಕಾರ್ಮಿಕರು ದೇಶ ಕಟ್ಟುವ ಕಾರ್ಯ ಮಾಡುತ್ತಾರೆ. ಇಂಥ ಕಾರ್ಮಿಕರ ಶ್ರಮಕ್ಕೆ ಗೌರವ ಕೊಡುವುದು ಸಮಾಜದ ಜವಾಬ್ದಾರಿಯಾಗಿದೆ. ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳನ್ನು ಗೌರವದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕ ನೀರಿಕ್ಷಕ ಪ್ರಸನ್ನಕುಮಾರ ಮಾತನಾಡಿ, ಜಿಲ್ಲೆಯ ನಿಜವಾದ ಕಾರ್ಮಿಕರಿಗೆ, ಕಾರ್ಮಿಕ ಕುಟುಂಬದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ ವಿವಿಧ ಸೌಲಭ್ಯಗಳನ್ನು ಮಂಜೂರು ಮಾಡುವಲ್ಲಿ ಅಧಿಕಾರಿಗಳು ಯಾವುದೇ ತಾರತಮ್ಯ ಮಾಡುವುದಿಲ್ಲ. ಆದರೆ ಕಾರ್ಮಿಕರ ಹೆಸರಲ್ಲಿ ಸೌಲಭ್ಯ ಪಡೆಯುತ್ತಿರುವ ನಕಲಿ ಕಾರ್ಮಿಕರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮುಂದಿನ ದಿನಗಳಲ್ಲಿ ಮಾಡಲಿದೆ. ಅರ್ಹ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಕಲ್ಪ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತುಕಾರಾಮ್ ಗೌರೆ ಮಾತನಾಡಿ, ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಕ್ಕಳು ಮುಂದಾಗಬೇಕು ಎಂದು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಶಿವಾನಂದ ಘಟ್ಟಿ, ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಜಗತಾಪ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಾದ ಶ್ವೇತಾ, ಪ್ರದೀಪ್, ಪೂಜಾ, ಮಧು, ಮಲ್ಲೇಶ, ಎಂ.ಡಿ.ಮುಜೀಬ್, ಜ್ಯೋತಿ, ಶಿವಾನಂದ, ರೋಹಿಣಿ, ಜೈಪಾಲ್, ವಿಜಯ, ನಾಗಮಣಿ, ಶಕ್ತಿದೇವಿ, ಕರುಣಾ, ಸಪನಾ, ವಿಜಯಶೀಲಾ, ಅಮೃತ್, ಸಂಧ್ಯಾ, ಸಪನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನರಸಿಂಗ ಸಾಮ್ರಾಟ್, ಡಾ| ಬಾಬುರಾವ್ ಅಣದೂರ್, ಹಣಮಂತ ಮೊಟ್ಟೆ, ಗೌತಮ್ ಮಿಸೆ, ಅಪ್ಪಣ್ಣಾ ಶೇರಿಕಾರ್, ಮಿಲಿಂದ ಬೋರಾಳೆ, ಪ್ರದೀಪ್ ಗಾಯಕವಾಡ್, ರಂಗಪ್ಪಾ ಚಾಂಬೋಳ್, ಶಿವಕಾಂತ ಗುರಂನೋರ್, ಅಷ್ಟಾಗೌತಮ್‌ಸಿಂಗ್ ಇತರರು ಇದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಸಂಕಲ್ಪ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.