ಬೀದರ: ಆ್ಯಸಿಡ್ ದಾಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಹೇಳಿದರು.
ನಗರದ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪೋಕ್ಸೋ ಕಾಯ್ದೆ 2012 ಹಾಗೂ ಆ್ಯಸಿಡ್ ದಾಳಿ ತಡೆ, ಕರ್ನಾಟಕ ಸಂತ್ರಸ್ಥರ ಪರಿಹಾರ ಯೋಜನೆ 2011 ಹಾಗೂ ನಾಲಸ್ಸಾ ವಿಕ್ಟಿಮ್ ಕಂಪೆನ್ಸೇಷನ್ ಸ್ಕೀಮ್ 2018ರ ಕುರಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಆ್ಯಸಿಡ್ ದಾಳಿಗಳು ಸಾಮಾನ್ಯವಾಗಿ ಮಹಿಳೆ ಮತ್ತು ಯುವತಿಯರ ಮೇಲೆ ಹೆಚ್ಚಾಗಿ ನಡೆಯುತ್ತಿರುವುದು ಕಂಡುಬಂದಿದೆ. ಸರ್ವೋಚ್ಛ ನ್ಯಾಯಾಲಯವು, ಲಕ್ಷ್ಮೀ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದ ತೀರ್ಪಿನಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆ್ಯಸಿಡ್ ಮಾರಾಟದ ಬಗ್ಗೆ ನಿಯಮಗಳನ್ನು ರೂಪಿಸುವಂತೆ ಸೂಚಿಸಿ, ಮಾರ್ಗಸೂಚಿಗಳನ್ನು ನೀಡಿದೆ. ಅದಂತೆ ಮಾರಾಟಗಾರರು ಯಾವ ವ್ಯಕ್ತಿಗೆ (ಪೂರ್ಣ ವಿಳಾಸದ ಜೊತೆಗೆ) ಮತ್ತು ಎಷ್ಟು ಪ್ರಮಾಣದ ಆ್ಯಸಿಡ್ ಮಾರಾಟ ಮಾಡಲಾಗಿದೆ ಎನ್ನುವ ಬಗ್ಗೆ ರೆಜಿಸ್ಟರ್ ನಿರ್ವಹಿಸದೇ ಇದ್ದಲ್ಲಿ ಆ್ಯಸಿಡ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸರ್ಕಾರ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ ತೋರಿಸದ ವ್ಯಕ್ತಿಗೆ ಆ್ಯಸಿಡ್ ಮಾರಾಟ ಮಾಡುವಂತಿಲ್ಲ. ಖರೀದಿಸುವ ವ್ಯಕ್ತಿ ಯಾವ ನಿರ್ದಿಷ್ಟ ಕಾರಣಕ್ಕಾಗಿ ಖರೀದಿಸುತ್ತಿದ್ದಾನೆ ಎನ್ನುವ ಬಗ್ಗೆ ಮಾರಾಟಗಾರರಿಗೆ ತಿಳಿಸಬೇಕು. ಮಾರಾಟಗಾರರು ಆ್ಯಸಿಡ್ ದಾಸ್ತಾನು ಬಗ್ಗೆ 15 ದಿವಸಗಳ ಒಳಗಾಗಿ ಸಬ್ ಡಿಜಿಜನಲ್ ಮ್ಯಾಜಿಸ್ಟ್ರೇಟ್ ಇವರಿಗೆ ತಿಳಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆ್ಯಸಿಡ್ ಮಾರಾಟ ಮಾಡುವಂತಿಲ್ಲ. ನಿಗದಿತ ಅವಧಿಯಲ್ಲಿ ದಾಸ್ತಾನು ವರದಿ ನೀಡದೇ ಇದ್ದಲ್ಲಿ ಇರುವ ದಾಸ್ತಾನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದು. ಮತ್ತು 50,000 ರೂ.ಗಳವರೆಗೆ ದಂಡ ವಿಧಿಸಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು, ಆಸ್ಪತ್ರೆ, ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳಿಗೆ ಆ್ಯಸಿಡ್ ಅವಶ್ಯಕತೆ ಇದ್ದಲ್ಲಿ ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬೇಕು. ಪ್ರಯೋಗಾಲಯದಿಂದ ಹೊರ ಬರುವ ವ್ಯಕ್ತಿ ಮತ್ತು ವಿದ್ಯಾರ್ಥಿಯ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಕರ್ನಾಟಕ ಸರ್ಕಾರವು 2015ರಲ್ಲಿ ಆ್ಯಸಿಡ್‌ಅನ್ನು ವಿಷ ಪದಾರ್ಥ ಎಂದು ಪರಿಗಣಿಸಿದ್ದು, ಅದನ್ನು ಮಾರಾಟ ಮಾಡುವುದಕ್ಕೆ ನಿಯಮಗಳನ್ನು ರೂಪಿಸಿದೆ ಎಂದು ವಿವರಿಸಿದರು.
ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ ಅಥವಾ ವ್ಯಕ್ತಿಗೆ ಪರಿಹಾರ ಧನ ಮಂಜೂರು ಮಾಡುವಂತೆ ಸರ್ವೋಚ್ಛ ನ್ಯಾಯಾಲಯವು ಪರಿವರ್ತನಾ ಕೇಂದ್ರದ ವಿರುದ್ಧ ಯುನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದ ತೀರ್ಪಿನಲ್ಲಿ ಆ್ಯಸಿಡ್ ದಾಳಿ ಸಂತ್ರಸ್ಥರ ಪರಿಹಾರ ಯೋಜನೆ 2016 ರೂಪಿಸುವಂತೆ ಸೂಚಿಸಿದೆ. ನಂತರ ನಿಪುಣ ಸಕ್ಷೇನಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಹೊಸ ಸಂತ್ರಸ್ಥರ ಪರಿಹಾರ ಯೋಜನೆ 2018 ರೂಪಿಸಿದ್ದು, ಅದರಂತೆ ದಾಳಿಗೆ ತುತ್ತಾದ ಮಹಿಳೆಯ ಮುಖ ವಿರೂಪಗೊಂಡಲ್ಲಿ ಅವಳಿಗೆ 7ರಿಂದ 8 ಲಕ್ಷದ ವರೆಗೆ, ಶೇ.50ಕ್ಕಿಂತ ಹೆಚ್ಚು ಗಾಯಗಳು ಉಂಟಾದರೆ 5ರಿಂದ 8 ಲಕ್ಷದ ವರೆಗೆ, ಶೇ.50ಕ್ಕಿಂತ ಕಡಿಮೆ ಮತ್ತು 20ಕ್ಕಿಂತ ಹೆಚ್ಚಿಗೆ ಗಾಯಗಳು ಆಗಿದ್ದಲ್ಲಿ 3ರಿಂದ 5 ಲಕ್ಷ ಮತ್ತು ಶೇ.20ಕ್ಕಿಂತ ಕಡಿಮೆ ಗಾಯಗೊಂಡಿದ್ದರೆ 3 ರಿಂದ 4 ಲಕ್ಷಗಳ ವರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಪರಿಹಾರಧನ ಮಂಜೂರು ಮಾಡುವಂತೆ ನಿಯಮ ರೂಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ಈಗಾಗಲೇ 2018ರ ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಸರ್ವೋಚ್ಛ ನ್ಯಾಯಾಲಯದ ಯೋಜನೆಯ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. 2018ರ ಅಕ್ಟೋಬರ್‌ನಿಂದ ಜಾರಿಗೆ ಬಂದಿರುತ್ತದೆ ಎಂದರು. ಪೋಕ್ಸೊ ಕಾಯ್ದೆ-2012ರ ಕುರಿತು ಶಿವಲೀಲಾ ಎಸ್. ಕೊಡಗೆ ಮಾತನಾಡಿದರು. ಕಾಲೇಜು ಪ್ರಾಚಾರ್ಯರಾದ ಮಂಗಲಾ ಅವರು, ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ವಿವರಣೆ ನೀಡಿದರು.
ಕಾಲೇಜು ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕರಾದ ಶಂಕ್ರೆಪ್ಪ ಜನಕಟ್ಟಿ, ಅನೀಲ ಮೇತ್ರೆ, ಕಾಲೇಜು ಆಡಳಿತಾಧಿಕಾರಿ ಕಲ್ಪನಾ ಮಠಪತಿ ಸೇರಿದಂತೆ ಇತರರು ಇದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಾಂತಿ ಕಿರಣ ಚಾರಿಟೇಬಲ್ ಮತ್ತು ಶಿಕ್ಷಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.