ಬೀದರ: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನದತ್ತ ಹೆಚ್ಚು ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಬಾಬುರಾವ್ ದಾನಿ ಹೇಳಿದರು.
ನಗರದ ನೌಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ನ್ಯೂ ಮದರ್ ತೆರೆಸಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಯ ಸುವರ್ಣ ಮಹೋತ್ಸವ ಹಾಗೂ ಚಂದ್ರಯಾನ-1 ಮತ್ತು ಚಂದ್ರಯಾನ-2 ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರನ ಮೇಲೆ ಕಾಲಿಟ್ಟ ದಿನವನ್ನು ಅಮೆರಿಕಾದಲ್ಲಿ ರಾಷ್ಟ್ರೀಯ ಹಬ್ಬದ ರೀತಿ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮನೋಭಾವ ತುಂಬುವ ಕಾರ್ಯ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಭಾರತೀಯರಾದ ನಾವು ಅಳವಡಿಸಿಕೊಳ್ಳುವುದರಿಂದ ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಹತ್ತಾರು ಪುಸ್ತಕಗಳನ್ನು ಓದುವುದಕ್ಕಿಂತ ಇಂತಹ ಉಪನ್ಯಾಸಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ಭಂಡಾರ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಬಿ.ಮನೋಹರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದಾಗ ಮಾತ್ರ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಬಲಿಷ್ಠ ಹಾಗೂ ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬಹುದು ಎಂದರು.
ಉಪನ್ಯಾಸಕ ಶ್ಯಾಮಕಾಂತ ಕುಲಕರ್ಣಿ ಮಾತನಾಡಿ, ಚಂದ್ರಯಾನ 1 ಯಶಸ್ಸಿನ ಬಗ್ಗೆ ಮಕ್ಕಳಿಗೆ ತಿಳಿಸಿದರು. ಭಾರತದ ವಿಜ್ಞಾನಿಗಳ ಸತತ ಪ್ರಯತ್ನದಿಂದ ಈ ಚಂದ್ರಯಾನ 1 ಉಡಾವಣೆ ಸಾಧ್ಯವಾಯಿತು. ಮತ್ತು ಚಂದ್ರನ ಮೇಲೆ ನೀರಿನ ಅಂಶ ಇರುವುದನ್ನು ಈ ಯಾನದಿಂದ ಪತ್ತೆ ಹಚ್ಚಲಾಯಿತು. ಇದು ನಮ್ಮ ರಾಷ್ಟ್ರಕ್ಕೆ ಒಂದು ದೊಡ್ಡ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಕರ್ನಾಟಕ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ| ರಾಜೇಂದ್ರ ಬಿರಾದಾರ, ವೀರೇಶ ರಾಂಪೂರ ಮಾತನಾಡಿದರು. ಕರಾವಿಪ ಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ ಕಲಾಲ್, ಸಂಜೀವಕುಮಾರ ಸ್ವಾಮಿ, ರಘುನಂದಾ ಜಿ, ಅಮರನಾಥ ಸಿಂಗೋಡೆ, ಗಂಗಾಧರ ಕೋರಿ, ಗಡ್ಡೆ ದಿಲೀಪ್, ಡಾ| ಶ್ರೀಕಾಂತ ಪಾಟೀಲ, ಡಾ| ಗಿರಿಜಾ ಮಂಗಳಗಟ್ಟಿ, ಡಾ| ಚನ್ನಕೇಶವ ಮೂರ್ತಿ, ಪಾಲೇದ ಮಹೇಶ್ವರಿ, ರಾಜಶ್ರೀ ಪಾಟೀಲ, ನಾಗಮ್ಮ ಭಂಗರಗಿ, ಬಾಲಸುಬ್ರಹ್ಮಣ್ಯಂ, ಬಸವರಾಜ ಹತ್ತಿಕಂಕಣ, ಡಾ|ರಾಜಕುಮಾರ, ವೆಂಕಟೇಶ ಹಿಬಾರೆ ಇದ್ದರು.