Advertisement

ಕಿತ್ತೂರು ರಾಣಿ ಚನ್ನಮ್ಮ ವೀರ ವನಿತೆ

12:45 PM Oct 24, 2019 | Naveen |

ಬೀದರ: ಬ್ರಿಟಿಷರ ವಿರುದ್ಧ ಸೆಣಸಿದ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವಳು. ಆಕೆಯ ಶೌರ್ಯ, ಸಾಹಸದ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಬಸವ ಮುಕ್ತಿ ಮಂದಿರದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಕರೆ ನೀಡಿದರು.

Advertisement

ನಗರದ ಮೈಲೂರು ಕ್ರಾಸ್‌ ಚನ್ನಮ್ಮ ವೃತ್ತದಲ್ಲಿ ಬಸವನಗರ ವಿಕಾಸ ಸಮಿತಿ, ವಿದ್ಯಾನಗರ ವಿಕಾಸ ಸಮಿತಿ, ಹಾರೂರಗೇರಿ ಬಸವ ಸಮಿತಿ ಹಾಗೂ ಡಾ| ಚನ್ನಬಸವ ಪಟ್ಟದ್ದೇವರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಚನ್ನಮ್ಮ ದೇಶದ ಮೊದಲ ಸ್ವತಂತ್ರ ಹೋರಾಟಗಾರ್ತಿ. ಆಕೆ ತೋರಿದ ಮಾರ್ಗದಲ್ಲೇ 1857ರ ಸಿಪಾಯಿದಂಗೆ ನಡೆದಿದೆ. ಈಗ ನಮ್ಮ ಕೆಲವು ದುಷ್ಟಶಕ್ತಿಗಳು ಒಳಗೊಳಗೆ ಪಾಕಿಸ್ತಾನ, ಚೀನಾ ದೇಶಕ್ಕೆ ಸಹಕಾರ ನೀಡುತ್ತಿದ್ದು, ಅಂಥ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಬಗ್ಗು ಬಡಿಯಬೇಕಾಗಿದೆ ಎಂದು ಹೇಳಿದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ದೇಶಕ್ಕೆ ಸ್ವಾತಂತ್ರ್ಯದ ಮಾರ್ಗ ತೋರಿಸಿದವರು ಕನ್ನಡಿಗರು. ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂಥ ವೀರ ಮಹಿಳೆಯರು ಬ್ರಿಟಿಷರ ವಿರುದ್ಧ ಹೋರಾಡಿ ವಿಶ್ವಕ್ಕೆ ಕನ್ನಡದ ಕಿಚ್ಚು ತೋರಿಸಿದ್ದಾರೆ. ಅವರ ತ್ಯಾಗವನ್ನು ಇಂದಿನ ಯುವ ಪೀಳಿಗೆ ಸ್ಮರಿಸಿ ಆರಾಧಿ ಸಬೇಕು. ತಾಯಂದಿರು ನಾಡಿನ ವೀರ ಮಹಿಳೆಯರು ಹಾಗೂ ಯೋಧರನ್ನು ಮಕ್ಕಳಿಗೆ ಆದರ್ಶವಾಗಿಸಬೇಕು ಎಂದು ಹೇಳಿದರು.

ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಶೈಲಜಾ ಹುಡಗೆ ಮಾತನಾಡಿ, ಈಗ ಮಕ್ಕಳ ಬೌದ್ದಿಕ ವಿಕಾಸ ಹಾಗೂ ಧೈರ್ಯಶಾಲಿಯಾಗಿ ಹೊರ ಹೊಮ್ಮಲು ವೀರ ವನಿತೆಯರ ತ್ಯಾಗ ಹಾಗೂ ಬಲಿದಾನ ಬೋಧಿ ಸಬೇಕಿದೆ. ಮಕ್ಕಳಲ್ಲಿ ನೈತಿಕತೆ, ದೇಶಪ್ರೇಮ ಹಾಗೂ ಮಾತೃಭಾಷೆ ಕಿಚ್ಚು ಹೊತ್ತಿಸಬೇಕು ಎಂದು ಹೇಳಿದರು.

Advertisement

ವಿಕಾಸ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಚನ್ನಮ್ಮ ಸರ್ವ ಜನಾಂಗದ ಆಸ್ತಿ. ಆಕೆ ತ್ಯಾಗ ಎಲ್ಲ ಸ್ವಾತಂತ್ರ್ಯ ವೀರರಿಗೂ ಮೀರಿಸುವಂತಿದೆ. ಮೈಲೂರ ಕ್ರಾಸ್‌ ಹಿಂದಿನಿಂದಲೂ ಚನ್ನಮ್ಮ ವೃತ್ತ ಎಂದು ಕರೆಸಿಕೊಂಡಿದೆ. ಈಶಾನ್ಯ ಸಾರಿಗೆ ಸಂಸ್ಥೆ ಇಂದಿನಿಂದಲೇ ಬಸ್‌ ನಿಲ್ದಾಣದಿಂದ ಚನ್ನಮ್ಮ ವೃತ್ತದವರೆಗೆ ಹೊಸ ಬಸ್‌ ಆರಂಭಿಸಿದೆ. ಅಷ್ಟೇ ಅಲ್ಲ ಇಲ್ಲಿ ಒಂದು ಸುಂದರ ಉದ್ಯಾನ ನಿರ್ಮಿಸಿ ಅದರಲ್ಲಿ 30 ಅಡಿ ಎತ್ತರದ ಚನ್ನಮ್ಮ ಮೂರ್ತಿ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯೆ ಶಕುಂತಲಾ ಮಲ್ಕಪ್ಪ, ಸಂತೋಷಿ ಅರುಣಕುಮಾರ, ಧನರಾಜ ಕೋಟೆ, ಪ್ರಮುಖರಾದ ಬಲಭೀಮ ಬೆಟ್ಟದ, ಶಿವಕುಮಾರ ಭಾಲ್ಕೆ, ಶ್ರೀಕಾಂತ ಸ್ವಾಮಿ, ಬಸವರಾಜ ಪಾಟೀಲ ಹಾರೂರಗೇರಿ ಇದ್ದರು. ಮಂಡಳದ ಅಧ್ಯಕ್ಷೆ ರತ್ನಾ ಪಾಟೀಲ ಸ್ವಾಗತಿಸಿದರು. ಜ್ಯೋತಿ ಓಂಕಾರ ಜಲಾದೆ ನಿರೂಪಿಸಿದರು. ಶರಣಪ್ಪ ಹೋತಪೇಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next