ಬೀದರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರಾಜ್ಯದ 25,60,017 ರೈತರು ನೋಂದಣಿ ಮಾಡಿದ್ದು, 2,34,7683 ರೈತರು ಪ್ರಥಮ ಕಂತು, 3,28,321 ರೈತರು ಎರಡನೇ ಕಂತಿನ ಲಾಭ ಪಡೆದಿದ್ದಾರೆ.
ಈ ಯೋಜನೆಯಡಿ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ವರ್ಷಕ್ಕೆ 6 ಸಾವಿರ ರೂ. ನಿಧಿ ನಿಗದಿಪಡಿಸಿದ್ದು, ವರ್ಷದಲ್ಲಿ ಮೂರು ಕಂತುಗಳಲ್ಲಿ, ತಲಾ ಒಂದು ಕಂತಿನಲ್ಲಿ ಎರಡು ಸಾವಿರ ರೂ. ಹಣ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಸರ್ಕಾರದ ಲಾಭ ಪಡೆಯಲು ಒಂದೇ ಕುಟುಂಬದ ಪತಿ, ಪತ್ನಿ ಇಬ್ಬರೂ ಯೋಜನೆಯಲ್ಲಿ ನೋಂದಣಿ ಮಾಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ಇದೀಗ ನಡೆದಿದೆ. ಈಗಾಗಲೇ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಸರ್ಕಾರ ಪತ್ರ ಬರೆದಿದ್ದು, ಒಂದೇ ಕುಟುಂಬದ ಇಬ್ಬರ ಸದಸ್ಯರ ಹೆಸರು ನೋಂದಣಿ ಆಗಿದ್ದರೆ ಒಬ್ಬರ ಹೆಸರು ರದ್ದಾಗಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಂದಣಿ ಮಾಡಿಸಿದ ರೈತರ ದಾಖಲೆಗಳನ್ನು ಮೇಲಾಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ನಂತರವೇ ರೈತರು ಯೋಜನೆಯ ಲಾಭ ಪಡೆಯಬಹುದಾಗಿದೆ. ಇದೀಗ ರಾಜ್ಯ ಸರ್ಕಾರದಿಂದ ಎರಡು ಕಂತುಗಳಲ್ಲಿ ತಲಾ ನಾಲ್ಕು ಸಾವಿರ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿರುವುದು ಸಣ್ಣ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ರಾಜ್ಯ ಸರ್ಕಾರದಿಂದ 4000 ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದು, ಈ ಯೋಜನೆಯಿಂದ ರಾಜ್ಯದ ಸಣ್ಣ ರೈತರಿಗೆ ಲಾಭವಾಗಲಿದೆ.