ಬೀದರ: ಬೀದರ ಜಿಲ್ಲಾ ಕಲಾವಿದರ ಮಾಹಿತಿ ಕೋಶವನ್ನು ತಯಾರು ಮಾಡಿ ಜಗತ್ತಿಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ. ಅದಕ್ಕೆ ಬೇಕಾದ ತರಬೇತಿ ಹಾಗೂ ಸಹಾಯ, ಸಹಕಾರ ನಿಡುವುದಾಗಿ ಕನ್ನಡ ಶಾಸ್ತ್ರೀಯ ಭಾಷಾ ಮೈಸೂರಿನ ನಿರ್ದೇಶಕ ಡಾ| ಕೆ.ಆರ್. ದುರ್ಗಾದಾಸ್ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೀದರ ಜಿಲ್ಲೆ ಭಾವನಾತ್ಮಕತೆಯಿಂದ ಕೂಡಿದೆ. ಇಲ್ಲಿನ ಜನರ ಮಧ್ಯೆ ಪರಸ್ಪರ ಪ್ರೀತಿ-ವಿಶ್ವಾಸವಿದೆ. ಶರಣರು ಮೆಟ್ಟಿದ ಈ ನಾಡಿನಲ್ಲಿ ಸಹಜವೇ ಕರುಳು ಬಳ್ಳಿ ಸಂಬಂಧವಿದೆ. ನನ್ನ ವೃತ್ತಿ ಜೀವನ ಇದೇ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಆರಂಭವಾಗಿದೆ ಎಂದು ಹಳೆ ನೆನಪುಗಳನ್ನು ಸ್ಮರಿಸಿದರು. ಬೀದರ ಜಿಲ್ಲೆಯಲ್ಲಿ ಅನೇಕ ಅನಕ್ಷರಸ್ಥ ಕಲಾವಿದರಿದ್ದಾರೆ. ಅಂಥ ಕಲಾವಿದರಿಂದಲೇ ನಮ್ಮ ನಾಡು-ನುಡಿಯ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತಿದೆ. ಅಂತಹ ಮುಗ್ಧ ಕಲಾವಿದರನ್ನು ಬೆಳಕಿಗೆ ತರಲು ಸಂಘ ಹಾಗೂ ಪರಿಷತ್ತು ಕ್ರಿಯಾಶೀಲತೆಯಿಂದ ಅವಿರತವಾಗಿ ಶ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಸಾಹಿತ್ಯ ಸಂಘ ಹಾಗೂ ಜಾನಪದ ಪರಿಷತ್ತು ಹಲವಾರು ವರ್ಷಗಳಿಂದ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ. ಕಲಾವಿದರನ್ನು ಪೋಷಿಸಿ ಸಂಸ್ಕೃತಿ ಉಳಿಸುವ ಕಾರ್ಯವನ್ನು ನಿರಂತರ ಮಾಡುತ್ತಿವೆ ಎಂದರು. ಈ ನಿಟ್ಟಿನಲ್ಲಿ ಕಲಾವಿದರ ಜೀವನದ ಮೇಲೆ ಬೆಳಕು ಚೆಲ್ಲಲು, ಇನ್ನೂ ಹೆಚ್ಚಿನ ಸೇವೆ ಮಾಡಲು ಅನುಕೂಲವಾಗುವಂತೆ ಇಲಾಖೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದರು.
ಪ್ರಶ್ನೋತ್ತರ: ಕೇಂದ್ರ ಸರ್ಕಾರ ಕಲಾವಿದರಿಗೆ ಪ್ರತಿದಿನ ಕೇವಲ 850 ರೂ. ಮಾತ್ರ ನೀಡುತ್ತಿದ್ದು, ಶಿಷ್ಟ ಸಾಹಿತಿಗಳಿಗೆ ಲಕ್ಷ ಲಕ್ಷಗಟ್ಟಲೆ ಧನಸಾಯ ನೀಡುತ್ತಿದೆ. ಈ ತಾರತಮ್ಯ ಯಾಕೆ? ಎಂದು ಡಾ| ರಾಜಕುಮಾರ ಹೆಬ್ಟಾಳೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದುರ್ಗಾದಾಸ್, ಕಲಾವಿದರಲ್ಲಿ ಅನೇಕರು ಅನಕ್ಷರಸ್ಥರು, ಬಡವರು ಹಾಗೂ ಇನ್ನೂ ಪರಿಣಿತ ಹೊಂದದವರಾಗಿದ್ದಾರೆ. ಆದ್ದರಿಂದ ಜಾನಪದ ಕಲಾವಿದರು ತಾವು ಬಣ್ಣ ಬಣ್ಣದ ಬಟ್ಟೆಗಳು, ಭಾಷಾಜ್ಞಾನ, ಹೊಸದಾಗಿ ಏನಾದರೂ ಸೃಷ್ಟಿ ಮಾಡಿ ಇನ್ನೊಬ್ಬರಿಗೆ ಮಾದರಿಯಾಗುವಂತೆ ತಮ್ಮ ಕಲೆಯನ್ನು ಪ್ರದರ್ಶಿಸಬೇಕು. ಜೊತೆಗೆ ಈ ತಾರತಮ್ಯವೇಕೆ? ಎಂದು ಕಲಾವಿದರು ಸರ್ಕಾರಕ್ಕೆ ಪ್ರಶ್ನಿಸಬೇಕು. ಆಗ ಮಾತ್ರ ಕೆಳವರ್ಗದ ಜಾನಪದ ಕಲಾವಿದರು ಕೂಡ ಹೆಚ್ಚು ಸಂಭಾವನೆ ಪಡೆಯಬಹುದು ಎಂದು ಉತ್ತರಿಸಿದರು.ಸಂಘದ ಕಾರ್ಯದರ್ಶಿ ಪ್ರೊ| ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ, ವಂದಿಸಿದರು. ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ಸಭೆಯಲ್ಲಿ ನಿಜಲಿಂಗಪ್ಪ ತಗಾರೆ, ಲಕ್ಷ್ಮಣರಾವ್ ಕಾಂಚೆ, ಕಾಶೀನಾಥ, ಮಹಾರುದ್ರ ಡಾಕುಳಗಿ, ಇನ್ನಿತರರು ಉಪಸ್ಥಿತರಿದ್ದರು.