ದುರ್ಯೋಧನ ಹೂಗಾರ
ಬೀದರ: 1999ರ ಕಾರ್ಗಿಲ್ ಯುದ್ಧ ಸಂದರ್ಭಲ್ಲಿ ಅನೇಕ ಸೈನಿಕರು ದೇಶಕ್ಕಾಗಿ ಹೋರಾಡಿದ್ದಾರೆ. ಅಂತಹ ಸೈನಿಕರ ಸಾಲಿನಲ್ಲಿ ಬೀದರ ನಗರದ ಬ್ಯಾಂಕ್ ಕಾಲೋನಿ ನಿವಾಸಿ ಬಕ್ಕಪ್ಪ ನಾಯಕ ಒಬ್ಬರು.
ಕಾರ್ಗಿಲ್ ಯುದ್ಧದಲ್ಲಿ ತಿಂಗಳ ಕಾಲ ಸೇವೆ ಸಲ್ಲಿಸಿದ ಬಕ್ಕಪ್ಪ ನಾಯಕ, ಟ್ರಾವಲ್ ರೇಂಜ್‌ಮೆಂಟ್ ತಂಡದಲ್ಲಿ ಭಾಗವಹಿಸಿದ್ದು, ತಾಂತ್ರಿಕ ತಂಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈ ಗುಂಪಿನಲ್ಲಿ 120 ಜನ ಸೈನಿಕರು ಕಾರ್ಯ ನಿರ್ವಹಿಸಿದರು. 1982ರಲ್ಲಿ ಸೇನೆಗೆ ಸೇರ್ಪಡೆಯಾದ ಬಕ್ಕಪ್ಪ ನಾಯಕ, 2002ರ ವರೆಗೆ ದೇಶದ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಇವರ ತಂಡದಲ್ಲಿ ಕರ್ನಾಟಕದ 8 ಜನರ ಸೈನಿಕರು ಕೂಡ ಇದ್ದರು ಎಂದು ನೆನಪಿಸಿಕೊಂಡ ಅವರು, ತಂಡದ ನಾಯಕ ಹಿಮಾಚಲ ಪ್ರದೇಶದ ರಣಬಹದ್ದೂರ್ ಸಿಂಗ್ ಕ್ಷಣ ಕ್ಷಣಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.
10ನೇ ತರಗತಿ ಫೇಲ್ ಆಗಿದ್ದ ಸಂದರ್ಭದಲ್ಲಿ ಸೈನ್ಯಕ್ಕೆ ಸೇರುವ ಮನುಸ್ಸು ಮಾಡಿದ ಬಕ್ಕಪ್ಪ ನಾಯಕ್, 1982ರಲ್ಲಿ ಸೇನೆಗೆ ಸೇರ್ಪಡೆಗೊಂಡರು. ಮೊದಲಿಗೆ ರಾಜಸ್ತಾನದಲ್ಲಿ ಸೇವೆ ಸಲ್ಲಿಸಿದ್ದು, ನಂತರ ಜಮ್ಮು-ಕಾಶ್ಮೀರ, ಗುಜರಾತ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಧಿಕಾರಿಗಳ ಸಹಾಯದಿಂದ ದೆಹಲಿಯಲ್ಲಿ ಐಟಿಐ ಪೂರ್ಣಗೊಳಿಸಿದ ಇವರು, ತಾಂತ್ರಿಕ ನಿರ್ವಹಣೆಯಲ್ಲಿ ಕೆಲಸಕ್ಕೆ ನಿಯೋಜನೆಗೊಂಡರು. ಯುದ್ಧ ಆರಂಭಗೊಂಡ ನಂತರ 19 ದಿನಗಳ ಕಾಲ ತಾಂತ್ರಿಕ ನಿರ್ವಹಣೆ ಕೆಲಸ ನಿರ್ವಹಿಸಿದ ಇವರು ಇದೀಗ ಬೀದರ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮರೆಯದ ಆ ದಿನಗಳು: ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಪ್ರತಿಯೊಬ್ಬ ಯೋಧರು ದೇಶದ ರಕ್ಷಣೆಯೇ ನಮ್ಮ ಗುರಿ ಎಂದು ಪ್ರಾಣತ್ಯಾಗ ಮಾಡಿ ದೇಶ ಸೇವೆ ಸಲ್ಲಿಸಿದ್ದಾರೆ. ಪ್ರತಿ ಕ್ಷಣ ಜಾಗೃತಿವಹಿಸಿ ಕರ್ತವ್ಯ ನಿರ್ವಹಿಸುವ ದಿನಗಳು ಇದ್ದವು. ಊಟ ಮಾಡುವುದಕ್ಕೂ ಸಮಯದ ಅಭಾವ ಇತ್ತು. ಮುಂಜಾನೆ 5 ಗಂಟೆಗೆ ತಿಂಡಿ ತಿಂದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೆವು. ಅಲ್ಲದೆ, ಕಾರ್ಗಿಲ್ ಯುದ್ಧ ಭೂಮಿಗೆ ತುಸು ದೂರದಲ್ಲಿಯೇ ನಮ್ಮ ಬೇಸ್ ಕ್ಯಾಂಪ್ ಇತ್ತು. ಯಾವ ಸಂದರ್ಭದಲ್ಲಿ ಏನಾಗುತ್ತೆ ಎಂಬ ಭಯ ಕೂಡ ಕಾಡುತ್ತಿತ್ತು. ಆ ದಿನಗಳ ನೆನಪು ಇಂದಿಗೂ ಮೈ ಜುಮ್ಮೆನ್ನುತ್ತದೆ. ಯುದ್ಧದಲ್ಲಿ ಗಾಯಾಳು ಯೋಧರನ್ನು ಬೇಸ್ ಕ್ಯಾಂಪ್‌ಗೆ ತರುವುದು. ವಿವಿಧ ಸಲಕರಣೆಗಳ ದುರಸ್ತಿಯನ್ನು ಯುದ್ಧ ಸ್ಥಳಕ್ಕೇ ತೆರಳಿ ಮಾಡುತ್ತಿದ್ದೆವು. ಎದುರಾಳಿ ದಾಳಿಗೆ ಪ್ರತಿದಾಳಿ ನಡೆಸಿದ್ದೇವೆ. ಇಂದು ಭಾರತ ವಿಶ್ವದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿದ್ದೆ. ಆಧುನಿಕ ಯಂತ್ರಗಳು ಸೈನಿಕರಿಗೆ ಲಭ್ಯ ಆಗುತ್ತಿರುವುದು ಸಂತಸ ತಂದಿದೆ ಎಂದರು ಬಕ್ಕಪ್ಪ.
ಸೈನಿಕರ ಗೌರವಿಸಬೇಕು
ದೇಶ ಕಾಯುವ ಸೈನಿಕರು ಇಲ್ಲದ ಪರಿಸ್ಥಿತಿ ಊಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಸೈನಿಕರನ್ನು ಗೌರವಿಸಬೇಕು. ಸೇನೆಯಲ್ಲಿ ಕೆಲಸ ನಿರ್ವಹಿಸಿ ಜಿಲ್ಲೆಗೆ ಮರಳಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ವಿವಿಧ ಸೌಲಭ್ಯಗಳು ನೀಡಬೇಕು ಎಂಬ ನಿಯಮಗಳು ಇವೆ. ಕನಿಷ್ಟ ನಾಲ್ಕು ಎಕರೆ ಭೂಮಿ ಒದಗಿಸಬೇಕಿತ್ತು. ಆದರೆ, ಇಂದಿಗೂ ಸರ್ಕಾರ ಸೈನಿಕರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಬಕ್ಕಪ್ಪ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.