Advertisement

ಜ್ಞಾನ-ಅನ್ನದ ಭಾಷೆಯಾಗಲಿ ಕನ್ನಡ: ಚವ್ಹಾಣ

12:57 PM Nov 02, 2019 | Naveen |

ಬೀದರ: ಬಹುಜನರ ಭಾಷೆಯಾಗಿರುವ ಕನ್ನಡ ಜ್ಞಾನದ ಮತ್ತು ಅನ್ನದ ಭಾಷೆಯಾಗಬೇಕು. ಪ್ರಸ್ತುತ ತಂತ್ರಜ್ಞಾನವು ಇಂಗ್ಲಿಷ್‌ಅನ್ನು ಅವಲಂಬಿಸಿದೆ. ತಂತ್ರಜ್ಞಾನ ಮತ್ತು ಈಗಿನ ಶಿಕ್ಷಣ ಪದ್ಧತಿಯು ಕನ್ನಡವನ್ನು ಹೆಚ್ಚಾಗಿ ಒಳಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇವತ್ತು ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್‌ಗೆ ಸ್ವಂತ ಲಿಪಿ ಇಲ್ಲ. ಅದು ರೋಮನ್‌ ಲಿಪಿಯನ್ನು ಅನುಕರಿಸಿದೆ. ಹಿಂದಿಗೂ ಸ್ವಂತ ಲಿಪಿ ಇಲ್ಲ, ಅದು ದೇವನಾಗರಿ ಲಿಪಿಯನ್ನು ಅನುಕರಿಸಿದೆ. ಆದರೆ, ಕನ್ನಡ ಭಾಷೆಗೆ ಸ್ವಂತ ಲಿಪಿ ಇದೆ ಎಂದು ಹೇಳಿದರು.

ನಿಜಾಮರ ಆಡಳಿತದ ಪರಿಣಾಮದಿಂದ ಇದುವರೆಗೂ ಹೈದ್ರಾಬಾದ್‌-ಕರ್ನಾಟಕವೆಂದಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ ಹಿರಿಮೆ ಬಿಜೆಪಿ ಸರ್ಕಾರದ್ದು. ಶಿವಶರಣರ ಸಮಾನತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದೇವೆ. ಮತ್ತು ನೂತನ ಅನುಭವ ಮಂಟಪಕ್ಕೆ 50 ಕೋಟಿ ರೂ. ಮಂಜೂರು ಮಾಡಿ, 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಕನ್ನಡ ಭವನ ಅನುದಾನಕ್ಕೆ ಪ್ರಸ್ತಾವನೆ: ಬೀದರನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮೊದಲ ಹಂತದ 50 ಲಕ್ಷ ರೂ.ಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನವೆಂಬರ್‌ ತಿಂಗಳನಲ್ಲೇ ಅದು ಬಿಡುಗಡೆಯಾಗುವಂತೆ ಪ್ರಯತ್ನ ಮಾಡುತ್ತೇನೆ. ನಗರದ ಅಂಬೇಡ್ಕರ ವೃತ್ತದ ಬಳಿ ಇರುವ ಬಸ್‌ ತಂಗುದಾಣಕ್ಕೆ ಕನ್ನಡಕ್ಕಾಗಿ ಹೋರಾಡಿದ ಪ್ರಭುರಾವ್‌ ಕಂಬಳಿವಾಲೆ ಬಸ್‌ ತಂಗುದಾಣ ಎಂದು ನಾಮಕರಣ ಮಾಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿರುವ ಕೆಲವು ಪ್ರಮುಖ ಉದ್ಯಾನವನಗಳಿಗೆ ಕನ್ನಡ ಕವಿಗಳ ಹೆಸರು ಇಡಲಾಗುವುದು. ಜಿಲ್ಲೆಯಲ್ಲಿರುವ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿರುವಂತೆ ಸೂಚಿಸಲಾಗಿದೆ. ಎಲ್ಲ ತಾಲೂಕುಗಳಲ್ಲಿ ಕನ್ನಡ ಭವನಕ್ಕಾಗಿ ನಿವೇಶನ ಒದಗಿಸಲಾಗುವುದು ಎಂದರು.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು 6 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಗಳನ್ನು ಎರಡು ಕಂತುಗಳಲ್ಲಿ ನೀಡುವ ಕುರಿತು ರಾಜ್ಯ ಸರ್ಕಾರವು ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ ಇಲ್ಲಿವರೆಗೆ ಮೂರು ಕಂತುಗಳು ಸೇರಿ 48.52 ಕೋಟಿ ರೂ. ಸಹಾಯಧನವನ್ನು ರೈತರಿಗೆ ನೀಡಲಾಗಿದೆ ಎಂದು ಹೇಳಿದರು.

Advertisement

ಕೃತಕ ಗರ್ಭಧಾರಣೆಗೆ ಬೀದರ ಆಯ್ಕೆ: ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಿದ್ದು, ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮದಡಿ ರಾಜ್ಯದ 17 ಜಿಲ್ಲೆಗಳಲ್ಲಿ ಬೀದರ ಜಿಲ್ಲೆಯು ಸಹ ಆಯ್ಕೆಯಾಗಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಡಿ ಈ ಯೋಜನೆಯಡಿ ಪ್ರತಿ ತಾಲೂಕಿಗೆ 20 ಗ್ರಾಮ/ ಗುತ್ಛಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಗ್ರಾಮ/ ಗುತ್ಛಗ್ರಾಮಗಳಲ್ಲಿ 200 ಕಡಿಮೆ ಇಳುವರಿಯ ರಾಸುಗಳನ್ನು ಆಯ್ಕೆ ಮಾಡಿ ಇವುಗಳಿಗೆ ಉತ್ಕೃಷ್ಟ ವಿದೇಶಿ ಹಾಗೂ ಉತ್ತಮ ಇಳುವರಿಯ ದೇಶಿ ತಳಿಗಳಾದ ಸಾಹಿವಾಲ್‌,
ಗಿರ್‌ ಮತ್ತು ಥಾರ್ಪಾಕರ್‌ ತಳಿಯ ಹೋರಿಗಳ ವಿರ್ಯ ಬಳಸಿ ಕೃತಕ ಗರ್ಭಧಾರಣೆ ಮೂಲಕ ರೈತರ ಜಾನುವಾರುಗಳ ಇಳುವರಿ ಹೆಚ್ಚಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 333 ಅತಿಥಿ ಶಿಕ್ಷಕರು ಹಾಗೂ ಪ್ರೌಢಶಾಲೆಗಳಲ್ಲಿ 134 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಾಲೆಗಳ ಒಟ್ಟು 832 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಲಿಖೀತ ಪರೀಕ್ಷೆ ನಡೆಸಿದ್ದು, ಮೌಲ್ಯಮಾಪನ ಕಾರ್ಯ ಮುಗಿದೆ.ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next