ಬೀದರ: ಜಿಲ್ಲೆಯ ವಿವಿಧೆಡೆ ಭ್ರಷ್ಟಾಚಾರದ ದೂರುಗಳು ಕೇಳಿ ಬರುತ್ತಿದ್ದು, ಬೀದರ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಂದಾಯ, ತಹಶೀಲ್ದಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ಕುರಿತು ಜಿಲ್ಲೆಯ ಜನರಿಂದ ಅನೇಕ ಆರೋಪ, ದೂರುಗಳು ಬರುತ್ತಿವೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನಿಸುತ್ತೇನೆ. ಈ ಕಾರ್ಯಕ್ಕೆ ಜನರ ಜತೆಗೆ ಅಧಿಕಾರಿಗಳ ಸಹಕಾರ ಕೂಡ ಮುಖ್ಯವಾಗಿದೆ ಎಂದ ಅವರು, ಸಾರ್ವಜನಿಕರು ವಿಕಾಸ ಬಯಸಿದ್ದು, ತಮ್ಮ ಓಟಕ್ಕೆ ಅಧಿಕಾರಿಗಳು ಸಹ ಕೈ ಜೋಡಿಸಬೇಕು ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿ ವಿಷಯ ಕುರಿತು ಅಗತ್ಯ ಬಿದ್ದರೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇನೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸುತ್ತೇನೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಗುರಿ ಹೊಂದಿದ್ದೇನೆ ಎಂದರು. ಪಶು ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಶೀಘ್ರ ಕ್ರಮ ವಹಿಸಲಾಗುವುದು. ಹಿಂದುಳಿದ ಔರಾದ್ ತಾಲೂಕಿನಲ್ಲಿ ಈ ಹಿಂದೆ ಹಲವಾರು ಬಾರಿ ಶಿಕ್ಷಕರ- ಪಾಲಕರ ಸಭೆ ನಡೆಸಿದ್ದು, ಫಲಿತಾಂಶ ಸುಧಾರಣೆಯಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಭೆ ನಡೆಸಲು ಶಿಕ್ಷಣ ಇಲಾಖೆಯಿಂದ ಕಾರ್ಯಯೋಜನೆ ರೂಪಿಸಿ ಫಲಿತಾಂಶ ಸುಧಾರಣೆಗೆ ಯತ್ನಿಸಲಾಗುವುದು. ಶಿಕ್ಷಣ ಹಾಗೂ ರೈತರ ಸಮಸ್ಯೆಗಳಿಗೆ ಮಹತ್ವ ನೀಡುವುದಾಗಿ ಹೇಳಿದರು.
ಭಾಷಣ ಆರಂಭದಲ್ಲಿ ಕನ್ನಡ ಮಾತನಾಡಿದ ಸಚಿವ ಪ್ರಭು ಚವ್ಹಾಣ ನಂತರ ಪೂರ್ಣ ಭಾಷಣವನ್ನು ಹಿಂದಿಯಲ್ಲೇ ಮಾಡಿದ್ದು ಚರ್ಚೆಗೆ ಗ್ರಾಸವಾಯಿತು. ಈ ಹಿಂದೆ ಪಶು ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕನ್ನಡದಲ್ಲಿ ಮಾತನಾಡುವಂತೆ ಸೂಚಿಸಿದ ಸಚಿವರು ಇದೀಗ ಹಿಂದಿ ಭಾಷೆಯಲ್ಲಿ ಯಾಕೆ ಭಾಷಣ ಮಾಡಿದರು ಎಂದು ಅಧಿಕಾರಿಗಳು ಮಾತಾಡಿಕೊಳ್ಳುತ್ತಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟಪಡಿಸಿದ ಸಚಿವರು, ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿಯಾಗಿ ಭಾಷಣ ಮಾಡಿದ್ದೇನೆ. ಯಾವುದೇ ಸಮಸ್ಯೆ ಆಗಬಾರದು ಎಂದು ಹಿಂದಿಯಲ್ಲಿ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಧ್ವಜಾರೋಹಣ ಬಳಿಕ ವಿವಿಧ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ, ಸಂಸದ ಭಗವಂತ್ ಖೂಬಾ, ಶಾಸಕರಾದ ಬಂಡೆಪ್ಪಾ ಖಾಶೆಂಪೂರ್, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ್ ಅರಳಿ, ವಿಜಯಸಿಂಗ್, ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಪಂಚಾಯತ್ ಸಿಇಒ ಜ್ಞಾನೇಂದ್ರಕುಮಾರ್ ಗಂಗವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಹೆಚ್ಚುವರಿ ಎಸ್.ಬಿ. ಪಾಟೀಲ ಉಪಸ್ಥಿತರಿದ್ದರು.