Advertisement

ಹುಟ್ಟಿ ಬೆಳೆದ ಹಳ್ಳಿಯತ್ತ ತಿರುಗಿ ನೋಡಿ

06:40 PM Nov 18, 2019 | Naveen |

ಬೀದರ: ಭಾರತದ ಆತ್ಮ ಹಳ್ಳಿಯಲ್ಲಿದ್ದು, ಹಳ್ಳಿಯ ವಿಕಾಸ ಆಗದಿದ್ದರೆ ನಮ್ಮ ವಿಕಾಸ ಅಸಾಧ್ಯ. ಆದ್ದರಿಂದ ಇಲ್ಲಿಯ ಜನತೆ ತಮ್ಮ ಗ್ರಾಮವನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವಂತೆ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕರೂ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು.

Advertisement

ಬೆಂಗಳೂರಿನ ಗಾಂಧಿ  ಭವನದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪರಿವಾರ ಮಿಲನ-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಶುದ್ಧವಾದ ಗಾಳಿ, ನೀರು ಹಾಗೂ ಆಹಾರ ಸಿಗದಿದ್ದರೆ ನಮ್ಮ ಜೀವನ ಅಂತ್ಯವಾಗಲಿದೆ. ಇವೆಲ್ಲವೂ ಸಿಗುವುದು ಹಳ್ಳಿಯಿಂದ ಮಾತ್ರ. ಅದಕ್ಕಾಗಿ ನಾವು ಹಳ್ಳಿಗಳ ಉದ್ಧಾರಕ್ಕಾಗಿ ಕೆಲಸ ಮಾಡಬೇಕೆಂದು ಹೇಳಿದರು. ಯುವಜನರು ಸರ್ಕಾರಿ ನೌಕರಿಯ ಹುಚ್ಚು ಬಿಟ್ಟು ತನ್ನ ಕಾಲ ಮೇಲೆ ತಾನು ನಿಲ್ಲುವ ಸಂಕಲ್ಪ ತೊಡಬೇಕು. ಆ ಹಿನ್ನೆಲೆಯಲ್ಲಿ ಹತ್ತು ವರ್ಷಗಳಿಂದ ಸಂಸ್ಥೆ ಹಾಗೂ ವಿಕಾಸ ಅಕಾಡೆಮಿಗಳು ಎಂಟು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ. ತಾವೆಲ್ಲರು ಹಳ್ಳಿ ಬಿಟ್ಟು ನಗರ ಸೇರಿದ್ದಿರಿ, ಮತ್ತೆ ಹುಟ್ಟಿ ಬೆಳೆದ ಹಳ್ಳಿ ಕಡೆ ತಿರುಗಿ ನೋಡಿ ಎಂದರು.

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಐಎಎಸ್‌, ಕೆಎಎಸ್‌ ತರಬೇತಿ ಸೇರಿದಂತೆ ಇತರೆ ಯಾವುದೇ ತರಬೇತಿ ಪಡೆಯಲು ಬರುವ ಕಲ್ಯಾಣ ಕರ್ನಾಟಕದ ಜನರಿಗೆ ದೆಹಲಿಯ ಕರ್ನಾಟಕ ಭವನ ಮಾದರಿಯಲ್ಲಿ ಇಲ್ಲಿ ಕಲ್ಯಾಣ ಕರ್ನಾಟಕ ಭವನ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

2025ರೊಳಗೆ ಈ ಭಾಗದಲ್ಲಿ ಸುಮಾರು 10 ಕೋಟಿ ಬೆಲೆ ಬಾಳುವ ಸಾಹಿತ್ಯ ಮಾರಾಟ ಮಾಡಲಾಗುವುದು. 2025ನೇ ವರ್ಷ ಸೇಡಂನಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ನಡೆಯಲಿದ್ದು, ಆ ಉತ್ಸವದಲ್ಲಿ 20 ಲಕ್ಷಕ್ಕೂ ಮೇಲ್ಪಟ್ಟು ಜನರು ಬಂದು ಹೋಗುವ ನಿರೀಕ್ಷೆ ಇದೆ ಎಂದರು.

Advertisement

ಶ್ರೀ ಸದಾಶಿವ ಸ್ವಾಮಿಗಳು ಮಾತನಾಡಿದರು. ಶ್ರೀನಿವಾಸ ತಿವಾರಿ ಸ್ವಾಗತಿಸಿದರು. ರಾಜಕುಮಾರ ರಾಸುರೆ ನಿರೂಪಿಸಿದರು ಅನಿಲ ಹಾರಕುಡೆ ವಂದಿಸಿದರು. ಎಂಎಲ್‌ಸಿ ಶರಣಪ್ಪ ಮಟ್ಟೂರ್‌, ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಪ್ರಮುಖರಾದ ಧನರಾಜ ತಾಡಂಪಳ್ಳಿ, ಶಿವಶರಣಪ್ಪ ವಾಲಿ, ಸೇಡಂನ ಶಿವಯ್ಯ ಮಠಪತಿ, ಕೃಷಿ ಅಧಿಕಾರಿ ಶಾಂತರೆಡ್ಡಿ, ಸರ್ಕಾರದ ನಿವೃತ್ತ ಮುಖ್ಯ ಅಭಿಯಂತರ ಸದಾಶಿವರೆಡ್ಡಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next